ADVERTISEMENT

ಚೆನ್ನೈ–ಸೂರತ್‌– ಮುಂಬೈ ಎಕ್ಸ್‌ಪ್ರೆಸ್‌ ಹೆದ್ದಾರಿಗೆ ಟೆಂಡರ್‌

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 6:59 IST
Last Updated 23 ಅಕ್ಟೋಬರ್ 2021, 6:59 IST

ಕಲಬುರಗಿ:ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಮೂಲಕ ಹಾದುಹೋಗುವ ‘ಚೆನ್ನೈ–ಸೂರತ್‌– ಮುಂಬೈ’ ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಟೆಂಡರ್‌ ಕರೆದಿದೆ. 6 ಲೈನ್‌ಗಳ ಈ ರಾಷ್ಟ್ರೀಯ ಹೆದ್ದಾರಿ ಕಲ್ಯಾಣ ಕರ್ನಾಟಕ ಭಾಗದ ಸಾರಿಗೆ ವ್ಯವಸ್ಥೆಗೂ ಅನುಕೂಲವಾಗಲಿದೆ.

ಮೊದಲ ಹಂತದಲ್ಲಿ ತೆಲಂಗಾಣ ರಾಜ್ಯದಲ್ಲಿ ಮಾತ್ರ ಟೆಂಡರ್‌ ಕರೆಯಲಾಗಿದೆ. ರಾಯಚೂರು ಗಡಿಯಿಂದ ಆಂಧ್ರದ ಕರ್ನೂಲ್‌ ನಗರಕ್ಕೆ ಸಂಪರ್ಕ ಕಲ್ಪಿಸುವ ಒಟ್ಟು 77 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣಕ್ಕೆ ₹ 1626 ಕೋಟಿ ಅಂದಾಜಿಸಲಾಗಿದೆ.

ಎರಡು ಹಂತದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಕರ್ನಾಟಕದ ಗಡಿಗೆ ಹೊಂದಿಕೊಂಡ ಕದ್ವಾಲ್‌ ಗ್ರಾಮದಿಂದ ತೆಲಂಗಾಣದ ಜುಣೇಕಲ್‌ ಗ್ರಾಮದವರೆಗೆ 39 ಕಿ.ಮೀ (ಅಂದಾಜು ₹ 756 ಕೋಟಿ) ಹಾಗೂ ಜುಣೇಕಲ್‌ನಿಂದ ಕರ್ನೂಲ್‌ ನಗರದವರೆಗೆ 38 ಕಿ.ಮೀ. (ಅಂದಾಜು ₹ 870 ಕೋಟಿ) ಟೆಂಡರ್‌ ಕರೆಯಲಾಗಿದೆ.

ADVERTISEMENT

ಅನುಕೂಲ ಏನು?: ಸದ್ಯಕ್ಕೆ ರಾಜ್ಯದಲ್ಲಿ ನಡೆಯಲಿರುವ ಕಾಮಗಾರಿಗೆ ಟೆಂಡರ್ ಕರೆದಿಲ್ಲ. ಇನ್ನೂ ಭೂಸ್ವಾಧೀನ ಪ್ರಕ್ರಿಯೆಗಳು ನಡೆದಿವೆ. ಆದರೂ, ಕರ್ನೂಲ್‌ವರೆಗೆ ಷಟ್ಪಥ ಹೈಸ್ಪೀಡ್‌ ಹೆದ್ದಾರಿ ನಿರ್ಮಾಣವಾದರೆ ಕಲ್ಯಾಣ ಕರ್ನಾಟಕ ಭಾಗದ ಪ್ರಯಾಣಿಕರು ಹಾಗೂ ವಾಣಿಜ್ಯೋದ್ಯಮಿಗಳಿಗೂ ಅನುಕೂಲವಾಗಲಿದೆ.

ಈಗ ರಸ್ತೆ ಮೂಲಕ ಬೆಂಗಳೂರಿಗೆ ಸಂಚರಿಸಲು 10 ತಾಸು ಸಮಯ ಹಿಡಿಯಲಿದೆ. ರಾಯಚೂರು ಗಡಿಯಿಂದ ಕರ್ನೂಲ್‌ವರೆಗೆ ಈ ಹೆದ್ದಾರಿ ನಿರ್ಮಾಣವಾದರೆ ಬೆಂಗಳೂರು ಮಾತ್ರವಲ್ಲ; ತಿರುಪತಿ, ಚೆನ್ನೈ, ಮುಂಬೈ, ಪುಣೆ ನಗರಗಳಿಗೂ ಸಂಚಾರ ಸಂಪರ್ಕ ಸುಲಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.