ಚಿಂಚೋಳಿ: ‘ನಾಡಿನ ಅಭ್ಯುದಯಕ್ಕೆ ಮಠ ಮಾನ್ಯಗಳು ಅಪಾರ ಕೊಡುಗೆ ನೀಡಿವೆ’ ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಹಲಕೋಡಾ ಗ್ರಾಮದ ಸಿದ್ಧೇಶ್ವರ ದೇವಾಲಯದಲ್ಲಿ ರಟಕಲ್‌ನ ಮುರುಗೇಂದ್ರ ವಿರಕ್ತಮಠದ ಸಿದ್ಧರಾಮ ಸ್ವಾಮೀಜಿ ಅವರು ಅಧಿಕ ಮಾಸದ ಪ್ರಯುಕ್ತ ಕೈಗೊಂಡ 6ನೇ ಮೌನಾನುಷ್ಠಾನ ಸಮಾರೋಪ ಸಮಾರಂಭದಲ್ಲಿ ಬುಧವಾರ ಮಾತನಾಡಿದರು.
ಸಿದ್ಧರಾಮ ಸ್ವಾಮೀಜಿ ಚಿಕ್ಕ ವಯಸ್ಸಿನಲ್ಲಿ ಹಿರಿದಾದ ಜವಾಬ್ದಾರಿ ಹೊತ್ತು ಪ್ರತಿವರ್ಷ ಒಂದೊಂದು ಕಡೆ ಅನುಷ್ಠಾನ ನಡೆಸುವ ಮೂಲಕ ಭಕ್ತರ ಭವ ರೋಗ ಕಳೆದು ಸನ್ಮಾರ್ಗದ ದಾರಿ ತೋರುತ್ತಿದ್ದಾರೆ. ಭಕ್ತರು ಗುರುಗಳ ಮಾರ್ಗದರ್ಶನದಲ್ಲಿ ಸಾಗಿ ದುಶ್ಚಟಗಳನ್ನು ತ್ಯಜಿಸಬೇಕು’ ಎಂದು ಹೇಳಿದರು.
ಚಿತ್ತಾಪುರದ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಮಾತನಾಡಿ,‘ಭಾರತ ದೇಶ ಅಧ್ಯಾತ್ಮದ ತೊಟ್ಟಿಲು. ಇಲ್ಲಿ ಆದಿ ಅನಾದಿ ಕಾಲದಿಂದಲೂ ಋಷಿಮುನಿಗಳು ಲೋಕ ಕಲ್ಯಾಣಾರ್ಥ ಅನುಷ್ಠಾನ, ಜಪ ತಪ ನಡೆಸಿದ್ದಾರೆ.
ಇಂದಿಗೂ ಮಠಾಧೀಶರು ಭಕ್ತರ ಕಲ್ಯಾಣಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸಲು ಅನ್ನ, ಆಹಾರ ತ್ಯಜಿಸಿ ಉಪವಾಸ ಮೌನಾನುಷ್ಠಾನ ನಡೆಸುವುದು ಸಾಮಾನ್ಯವಾಗಿದೆ’ ಎಂದರು.
ನಾಗೂರಿನ ಅಲ್ಲಮಪ್ರಭು ಸ್ವಾಮೀಜಿ, ಬೇಲೂರಿನ ಪ್ರಭುಕುಮಾರ ಶಿವಾಚಾರ್ಯರು ಮಾತನಾಡಿದರು. ಸೂಗೂರಿನ ಚನ್ನರುದ್ರಮುನಿ ಶಿವಾಚಾರ್ಯರು, ಚಂದನಕೇರಾದ ಭೃಂಗಿ ಪಾಚೇಶ್ವರ ಕಟ್ಟಿಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಸಿದ್ಧಲಿಂಗ ಶಿವಾಚಾರ್ಯರು ಹೊಸಳ್ಳಿ, ಕೋಡ್ಲಿ ಬಸವಲಿಂಗ ಶಿವಾಚಾರ್ಯ, ರೇವಣಸಿದ್ದ ಶಿವಾಚಾರ್ಯರು ರಾಯಕೋಡ, ಬಸವಲಿಂಗ ಶಿವಾಚಾರ್ಯರು ಕೌಳಾ, ರುದ್ರಮುನಿ ಶಿವಾಚಾರ್ಯರು ಶರಣಸಿರಸಗಿ, ಹಾಗೂ ದೇವಸ್ಥಾನ ಕಮಿಟಿಯ ಅಧ್ಯಕ್ಷ ವಿಶ್ವನಾಥ ಪಾಟೀಲ ಕುಕ್ಕುಂದಾ, ಮುಖಂಡರಾದ ಗುರು ಪಾಟೀಲ ಯಡ್ಡಳ್ಳಿ, ಶಿವನಾಗೇಂದಪ್ಪ್ರ ಪಾಟೀಲ, ಮಹೇಶ ಪಾಟೀಲ, ಮುಕುಂದ ದೇಶ್ಪಾಂಡೆ, ಶಾಂತಪ್ಪ ರೆಮ್ಮಣ್ಣಿ, ಸಿದ್ದಣ್ಣ ಕೇಶ್ವಾರ, ಶಾಂತಕುಮಾರ ರಾಯಕೋಡ, ಮುರುಗಯ್ಯ ಪುರಾಣಿಕ ಮೊದಲಾದವರು ಇದ್ದರು.
ಇದೇ ವೇಳೆ ಶ್ರೀಗಳಿಗೆ ದೇವಸ್ಥಾನ ಸಮಿತಿಯ ವತಿಯಿಂದ ಬೆಳ್ಳಿ ಕಡಗ ತೊಡಿಸಿದರೆ, ವಿವಿಧೆಡೆಯ ಭಕ್ತರು ಸನ್ಮಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.