ADVERTISEMENT

ಚನ್ನಬಸವ ಶಿವಯೋಗಿಯ ವೈಭವದ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 6:33 IST
Last Updated 10 ಮಾರ್ಚ್ 2025, 6:33 IST
ಚಿಂಚೋಳಿ ಪಟ್ಟಣದಲ್ಲಿ ಭಾನುವಾರ ನಡೆದ ಹಾರಕೂಡ ಚನ್ನಬಸವ ಶಿವಯೋಗಿಗಳ ರಥೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು
ಚಿಂಚೋಳಿ ಪಟ್ಟಣದಲ್ಲಿ ಭಾನುವಾರ ನಡೆದ ಹಾರಕೂಡ ಚನ್ನಬಸವ ಶಿವಯೋಗಿಗಳ ರಥೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು   

ಚಿಂಚೋಳಿ: ಕಲ್ಯಾಣ ಕರ್ನಾಟಕದ ಜಾಗೃತ ನೆಲೆವೀಡು ಎಂದೇ ಖ್ಯಾತಿ‌ ಪಡೆದ ಚಿಂಚೋಳಿ ಪಟ್ಟಣದಲ್ಲಿ ಹಾರಕೂಡ ಚನ್ನಬಸವ ಶಿವಯೋಗಿಗಳ ವೈಭವದ ರಥೋತ್ಸವ ಶ್ರೀಮಠದ ಚನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ಅಪಾರ ಭಕ್ತ ಸಾಗರದ ಮಧ್ಯೆ ಜಯಘೋಷಗಳೊಂದಿಗೆ ಭಾನುವಾರ ಸಂಜೆ ಜರುಗಿತು.

ಇಲ್ಲಿನ ಪಾಪನಾಶ ಪಂಚಲಿಂಗೇಶ್ವರ ಬುಗ್ಗೆ ಬಳಿಯ ತೇರು ಮೈದಾನದಲ್ಲಿ‌ ನಡೆದ 74ನೇ ವರ್ಷದ ರಥೋತ್ಸವದಲ್ಲಿ ಚನ್ನಬಸವ ಶಿವಯೋಗಿ‌ ಮಹಾರಾಜ ಕೀ ಜೈ, ಚನ್ನವೀರ ಶಿವಾಚಾರ್ಯ ಮಹಾರಾಜ ಕೀ ಜೈ ಎಂಬ ಘೋಷಣೆ ಮೊಳಗಿದವು. ಕಾರಿಕ್, ನಾರು ಖರೀದಿಸಿ ರಥದ ಮೇಲೆ ಎಸೆದು ಭಕ್ತರು‌ ಕೃತಾರ್ಥರಾದರು. ಕೆಲವು‌ ಭಕ್ತರು ರಥದ ಮೇಲೆ ನಾಣ್ಯ ಎಸೆದು ಹರಕೆ ಸಲ್ಲಿಸಿದರು.

ಹೂವು ಹಾಗೂ ವಿದ್ಯುದ್ದೀಪದಿಂದ ರಥವನ್ನು ಅಲಂಕರಿಸಲಾಗಿತ್ತು. ಇದಕ್ಕೂ‌ ಮೊದಲು ಶ್ರೀಮಠದಿಂದ ಉಚ್ಚಾಯ ಹಾಗೂ ಪಲ್ಲಕ್ಕಿ ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ತೇರು ಮೈದಾನಕ್ಕೆ ಆಗಮಿಸಿ, ರಥಕ್ಕೆ ಉಚ್ಚಾಯಿ ಹಾಗೂ ಪಲ್ಲಕ್ಕಿ ಐದು ಸುತ್ತು ಹಾಕಿದ ನಂತರ ರುದ್ರಾಕ್ಷಿ‌ ಕಿರೀಟ ಧರಿಸಿ ಕೈಯಲ್ಲಿ‌ ಬೆತ್ತ ಹಿಡಿದು ಹೂವಿನ ಹಾಸಿಗೆಯ ದಾರಿಯಲ್ಲಿ ಸಾಗಿ ಬಂದು ರಥಕ್ಕೆ ಚನ್ನವೀರ ಶಿವಾಚಾರ್ಯರು ಪೂಜೆ ಸಲ್ಲಿಸಿದ ನಂತರ‌ ರಥೋತ್ಸವಕ್ಕೆ ಚಾಲನೆ ದೊರೆಯಿತು.

ADVERTISEMENT

ರಥೋತ್ಸವದಲ್ಲಿ ಉಪ್ಪಿನ‌ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮಿಗಳು, ಮಾಜಿ ಸಂಸದ ಡಾ. ಉಮೇಶ ಜಾಧವ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ, ಎಂಎಸ್ಐಎಲ್ ಮಾಜಿ ಅಧ್ಯಕ್ಷ ಡಾ. ವಿಕ್ರಮ ಪಾಟೀಲ, ಪುರಸಭೆ ಅಧ್ಯಕ್ಷ ಆನಂದ ಟೈಗರ್, ಸದ್ಭಕ್ತ ಮಂಡಳಿಯ ಅಧ್ಯಕ್ಷ ಕಲ್ಲಪ್ಪ ಹೊಗ್ತಾಪುರ, ಸಿಪಿಐ ಕಪಿಲದೇವ, ಗಂಗಮ್ಮ ಜಿನಿಕೇರಿ, ಸೂರ್ಯಕಾಂತ, ನಾಗರಾಜ ಕಲಬುರಗಿ, ಸುಭಾಷ್ಚಂದ್ರ ಸೀಳಿನ್, ಸಂತೋಷ ಗಡಂತಿ, ಶಂಕರ ಶಿವಪುರಿ, ಸಂತೋಷ ಭೋಜಿ ಸೇರಿದಂತೆ ಅನೇಕರು ಇದ್ದರು.

Highlights - ಶರಣ ಚರಿತಾಮೃತ ಪ್ರವಚನ ಸಮಾರೋಪ ಶಿವಾನುಭವ ಚಿಂತನ ಯಶಸ್ವಿ

ಚನ್ನಶ್ರೀ ಪ್ರಶಸ್ತಿ ಪ್ರದಾನ

ಕಲಾವಿದರಾದ ತೋಟಯ್ಯ ಶಾಸ್ತ್ರಿ ದೇವರಾಜ ಯರ್ಕಿಹಾಳ ಸುರೇಶ ಹೂಗಾರ ಹಾಗೂ ಪುಸ್ತಕೋದ್ಯಮಿ ಬಸವರಾಜ ಕೋನೆಕ ಅವರಿಗೆ ತಲಾ 5 ಗ್ರಾಂ ಚಿನ್ನದೊಂದಿಗೆ ಚನ್ನಶ್ರೀ ಪ್ರಶಸ್ತಿಯನ್ನು ಚನ್ನವೀರ ಶಿವಾಚಾರ್ಯರು ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಭಕ್ತರಾದ ಶಕುಂತಲಾ ಬಸವರಾಜ ಹೊತಪೇಟ ಹಾಗೂ ಸಾವಿತ್ರಿ ಸುರೇಶ ಮೇದಾ ದಂಪತಿಗೆ ಶ್ರೀಗಳು ಸನ್ಮಾನಿಸಿ ಗುರುರಕ್ಷೆ ಪ್ರದಾನ‌ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.