ಚಿಂಚೋಳಿ: ತಾಲ್ಲೂಕಿನ ವ್ಯಾವಹಾರಿಕ ಪಟ್ಟಣ ಸುಲೇಪೇಟದಲ್ಲಿ ವೀರಭದ್ರೇಶ್ವರ ಜಾತ್ರೆಯ ಸಡಗರ ಸಂಭ್ರಮ ಮನೆ ಮಾಡಿದೆ.
ಒಂದು ತಿಂಗಳು ಕಾಲ ನಡೆಯುವ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಪ್ರಭಾವಳಿ ಉತ್ಸವ ಶನಿವಾರ (ಏ.26) ಬೆಳಿಗ್ಗೆ ವೀರಭದ್ರೇಶ್ವರ ದೇವಾಲಯದಿಂದ ಮುಖ್ಯಬೀದಿ ಮೂಲಕ ಸಂಗಮೇಶ್ವರ ದೇವಾಲಯ ತಲುಪಿ ಅಲ್ಲಿಂದ ಮುಖ್ಯರಸ್ತೆ ಮೂಲಕ ಖಟ್ವಾಂಗೇಶ್ವರ ಮಠದ ಬಳಿಯ ತೇರು ಮೈದಾನಕ್ಕೆ ತಲುಪುವುದು.
ತೇರು ಮೈದಾನದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅಗ್ನಿಕುಂಡಕ್ಕೆ ಜೋಡು ಪಲ್ಲಕ್ಕಿ ಸಮೇತ ಪ್ರಭಾವಳಿ ಐದು ಸುತ್ತು ಹಾಕಿದ ನಂತರ ಮರಳಿ ದೇವಾಲಯಕ್ಕೆ ತೆರಳುವುದು. ಶತಮಾನಗಳ ಇತಿಹಾಸ ಹೊಂದಿರುವ ಪಗಡೆ ಬಜಾರ್ ಖ್ಯಾತಿಯ ಸುಲೇಪೇಟದ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ವೀರಭದ್ರೇಶ್ವನಿಗಿದೆ.
ಜಾತ್ರಾ ಕಾರ್ಯಕ್ರಮಗಳು: ಯಗಾದಿ ಹಬ್ಬಂದಿ ಆರಂಭವಾಗುವ ಜಾತ್ರಾ ಮಹೋತ್ಸವ ಬಸವಜಯಂತಿಗೂ ಮೊದಲು ಮುಗಿಯುತ್ತದೆ. ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ರುದ್ರಾಭಿಷೇಕ, 24ರಂದು ಸಂಜೆ 5 ಗಂಟೆಗೆ 2009ರ ಎಸ್‌ಎಸ್‌ಎಲ್‌ಸಿ ಬ್ಯಾಚ್ ವತಿಯಿಂದ ವೀರಗಾಸೆ ಪುರವಂತರ ಸೇವೆ, 25ರಂದು ಬೆಳಿಗ್ಗೆ 8 ಗಂಟೆಗೆ ಅಗ್ನಿಕುಂಡಕ್ಕೆ ಪೂಜೆ, ಸಂಜೆ 7 ಗಂಟೆಗೆ ಊರಿನ ಸಮಂಗಲೆಯರಿಂದ ದೀಪೋತ್ಸವ, 26ರಂದು ಬೆಳಿಗ್ಗೆ 8 ಗಂಟೆಗೆ ಪ್ರಭಾವಳಿ, ಸಂಜೆ 6 ಗಂಟೆಗೆ ರಥೋತ್ಸವ ಜರುಗಲಿದೆ.
ರಥೋತ್ಸವದ ನಂತರ ರಾತ್ರಿ 10 ಗಂಟೆಗೆ ಉಚ್ಚಾಯ ಮೆರವಣಿಗೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 27ರಂದು ಬೆಳಿಗ್ಗೆ 7 ಮತ್ತು ಸಂಜೆ 4 ಗಂಟೆಗೆ ಜಂಗಿ ಪೈಲ್ವಾನರ ಕುಸ್ತಿ ಪಂದ್ಯಾವಳಿ ನಡೆಯಲಿವೆ. ರಾಖಿಭಾಯ್ ಗೆಳೆಯರ ಬಳಗದಿಂದ ಏ.27ರಂದು ಸಂಜೆ 7.30ಕ್ಕೆ ಹಾಸ್ಯಪ್ರದರ್ಶನ ಹಾಗೂ ಸಂಗೀತ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿವೆ ಎಂದು ಸದ್ಭಕ್ತ ಮಂಡಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.