ADVERTISEMENT

ಸಂವಿಧಾನದ ಆಶಯದಂತೆ ಮಠಗಳ ಕಾರ್ಯ: ಸಚಿವ ಎಚ್.ಸಿ. ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 15:53 IST
Last Updated 15 ಜೂನ್ 2025, 15:53 IST
ಸೇಡಂ ತಾಲ್ಲೂಕಿನ ಕೋಡ್ಲಾ ಗ್ರಾಮದ ನವೀಕೃತ ಉರಿಲಿಂಗ ಪೆದ್ದೀಶ್ವರ ಮಠದ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಎಚ್.ಸಿ. ಮಹದೇವಪ್ಪ ವಚನ ಪ್ರಸ್ತುತ ಪಡಿಸಿದರು
ಸೇಡಂ ತಾಲ್ಲೂಕಿನ ಕೋಡ್ಲಾ ಗ್ರಾಮದ ನವೀಕೃತ ಉರಿಲಿಂಗ ಪೆದ್ದೀಶ್ವರ ಮಠದ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಎಚ್.ಸಿ. ಮಹದೇವಪ್ಪ ವಚನ ಪ್ರಸ್ತುತ ಪಡಿಸಿದರು   

ಸೇಡಂ: ‘ಮಠಮಾನ್ಯಗಳು ಸಂವಿಧಾನದ ಆಶಯದಂತೆ ತಮ್ಮ ಕೆಲಸ ಮಾಡಿದಲ್ಲಿ ಸಾಮಾಜಿಕ ಬದಲಾವಣೆ ಪ್ರಗತಿಯತ್ತ ಸಾಗುತ್ತದೆ’ ಎಂದು ಸಮಾಜಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೋಡ್ಲಾ ಗ್ರಾಮದ ಉರಿಲಿಂಗ ಪೆದ್ದೀಶ್ವರ ನವಿಕೃತ ಮಠದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘150 ವರ್ಷಗಳ ಇತಿಹಾಸ ಹೊಂದಿರುವ ಉರಿಲಿಂಗಪೆದ್ದಿ ಮಠ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ತರವಾದ ಕೆಲಸ ಮಾಡಿದೆ. ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ಜೀವನ ನಡೆಸುವ ಅವಶ್ಯಕತೆ ಇದೆ. ಇದಕ್ಕೆ ಬೇಕಾದ ಮಾರ್ಗದರ್ಶನವನ್ನು ಮಠಾಧೀಶರು ಮಾಡಬೇಕಿದೆ’ ಎಂದರು.

ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ‘ದಯವೇ ಧರ್ಮದ ಮೂಲವಾಗಿದ್ದು 12ನೇ ಶತಮಾನದಲ್ಲಿ ಶರಣರು ಇದನ್ನೇ ಒತ್ತಿ ಜಗತ್ತಿಗೆ ಸಾರಿದರು. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಬಾಲಕ ದೇವಾಲಯ ಪ್ರವೇಶ ಮಾಡಿದಾಗ ಅವನಿಗೆ ದಂಡ ವಿಧಿಸಲಾಯಿತು. ಜೊತೆಗೆ ಮಂಡ್ಯ ಜಿಲ್ಲೆಯಲ್ಲಿ ಮಂಗಳಾರತಿಯನ್ನು ಶಿಕ್ಷಕ ಕೈಯಲ್ಲಿ ಮುಟ್ಟಿದ್ದಕ್ಕೆ ದಂಡಿಸಲಾಗಿದೆ. ಇಂತಹ ಅಸ್ಪೃಶ್ಯತೆ ಘಟನೆಗಳು ಸಮಾಜದಲ್ಲಿ ಇಂದಿಗೂ ತಾಂಡವವಾಡುತ್ತಿರುವುದು ದುಃಖದ ಸಂಗತಿ.  ಇಂತಹ ಘಟನೆಗಳು ಮರುಕಳಿಸದಂತೆ ಜಾಗೃತಿ ವಹಿಸಿದಾಗ ಮಾತ್ರ ಬಸವಣ್ಣನವರ ಕನಸು ನನಸಾಗಲು ಸಾಧ್ಯ’ ಎಂದರು.

ADVERTISEMENT

ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ಮನುಷ್ಯ ಹೇಗೆ ಜೀವನ ನಡೆಸಬೇಕು ಎಂಬ ಮಾರ್ಗದರ್ಶನ ನೀಡುವ ಉದ್ದೇಶದಿಂದ ಶರಣ ಹಾಗೂ ಬಸವ ಧರ್ಮ ಹುಟ್ಟಿತು. ಶರಣಧರ್ಮವೂ ಕೆಳ ಸಮದಾಯದ ಧರ್ಮ. ವಚನ ಸಾಹಿತ್ಯಕ್ಕೆ ಶೋಷಿತ ಸಮುದಾಯದಿಂದ ಬಂದ ಶರಣರೇ ಹೆಚ್ಚು ವಚನಗಳನ್ನು ನೀಡಿದ್ದಾರೆ. ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿರು.

ಸಾರಂಗಧರ ಮಠದ ಮಹಾಂತ ಶಿವಾಚಾರ್ಯ, ಕೌಟಾದ ಬಸವ ಮಹಾಮನೆಯ ಸಿದ್ಧರಾಮ ಬೆಲ್ದಾಳ ಶರಣರು, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಗುರಮಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು.

ಕೋಡ್ಲಾದ ಶಂಭುಲಿಂಗೇಶ್ವರ ಸ್ವಾಮೀಜಿ, ಹರಳಯ್ಯ ಸ್ವಾಮೀಜಿ, ಬ್ರಹ್ಮಾನಂದ ಬಂತೇಜಿ, ಬಸವಲಿಂಗ ಮೂರ್ತಿ, ಮಲ್ಲಿಕಾರ್ಜುನ ಸ್ವಾಮೀಜಿ, ಧಾರವಾಡ ಬಸವಾನಂದ ಸ್ವಾಮೀಜಿ ಸೇರಿದಂತೆ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ, ಮಹಾಂತಪ್ಪ ಸಂಗಾವಿ, ಬಸವರಾಜ ಪಾಟೀಲ ಊಡಗಿ, ಡಿ.ಜಿ.ಸಾಗರ, ಸತೀಶರೆಡ್ಡಿ ಪಾಟೀಲ, ಶಂಭುರೆಡ್ಡಿ ಮದ್ನಿ, ಜೈಭೀಮ ಊಡಗಿ, ನಾಗೇಶರಾವ್ ಮಾಲಿ ಪಾಟೀಲ, ಸಿದ್ದು ಬಾನಾರ್, ಪ್ರೀತಿ ಬೋರಂಚಿ, ರವಿ ಸಾಹುತಂಬಾಕೆ, ಶಾಂತಪ್ಪ ಸಂಗಾವಿ, ಗುರುಲಿಂಗ ನೂಲಿ ಸೇರಿದಂತೆ ಇನ್ನಿತರರು ಹಾಜರಿದ್ದರು. ಶಂಕರ ಕೋಡ್ಲಾ ಸ್ವಾಗತಿಸಿದರು.

ಸೇಡಂ ತಾಲ್ಲೂಕು ಕೋಡ್ಲಾ ಗ್ರಾಮದ ನವೀಕೃತ ಉರಿಲಿಂಗ ಪೆದ್ದೀಶ್ವರ ಮಠದ ಉದ್ಘಾಟನಾ ಸಮಾರಂಭದಲ್ಲಿ ಸೇರಿದ್ದ ಜನಸ್ತೋಮ 

‘ಕ್ಷೇತ್ರಕ್ಕೆ ₹50 ಕೋಟಿ ಕೊಡುವೆ’:

ನಮ್ಮ ಸರ್ಕಾರದಲ್ಲಿ ಕ್ಷೇತ್ರಕ್ಕೆ ಲೋಕೋಪಯೋಗಿ ಇಲಾಖೆಯಿಂದ ₹40 ಕೋಟಿ ನೀಡಲಾಗುತ್ತಿದೆ. ಕೋಡ್ಲಾಜನರ ಬೇಡಿಕೆಯಂತೆ ಸೇಡಂ ಕ್ಷೇತ್ರಕ್ಕೆ ₹50 ಕೋಟಿಗೆ ಹೆಚ್ಚಿಸುವುದಾಗಿ ಸಚಿವ ಸತೀಶ ಜಾರಕಿಹೊಳಿಭರವಸೆ ನೀಡಿದರು. ವೇದಿಕೆಯಲ್ಲಿದ್ದ ಸಚಿವ ಡಾ.ಶರಣಪ್ರಕಾಶ ಪಾಟೀಲ ಮುಗುಳ್ನಗುತ್ತಾ ಸತೀಶ ಜಾರಕಿಹೊಳಿ ಅವರತ್ತ ನೋಟ ಬೀರಿದರು.

ಮಠದ ಉದ್ಘಾಟನೆಗೆ ಸಾವಿರಾರು ಭಕ್ತರು ವಿವಿಧೆಡೆಯಿಂದ ಹರಿದು ಬಂದಿದ್ದರು. ದಾರಿ ಇಕ್ಕಟ್ಟಾಗಿದ್ದರಿಂದ ದೂರದಲ್ಲಿಯೇ ವಾಹನಗಳನ್ನು ನಿಲ್ಲಿಸಿ ತಂಡೋಪತಂಡವಾಗಿ ನಡೆದುಕೊಂಡು ಬರುತ್ತಿರುವುದು ಕಂಡುಬಂತು. ವಿವಿಧೆಡೆಯಿಂದ ಆಗಮಿಸಿದ ಭಕ್ತರು ಹುಗ್ಗಿ ಬದನೆಕಾಯಿ ಪಲ್ಯ ಅನ್ನ ಸಾಂಬಾರ್‌ ಸವಿದು ಕಾರ್ಯಕ್ರಮ ಕಣ್ತುಂಬಿಕೊಂಡರು. ‘ಆಗಿನ ಮಠಕ್ಕಿಂತ ಈಗ ಮಠ ಬಾಳ್ ಚೊಲೋ ಆಗ್ಯಾದ. ಜ್ಞಾನಪ್ರಕಾಶ ಸ್ವಾಮೀಜಿ ಬಂದ್ ಮ್ಯಾಲ್ ಮಠ ಫಳ ಪಳ ಹೊಳಿಲಕತ್ತದ’ ಎಂದು ಭಕ್ತರು ಕೊಂಡಾಡಿದರು.

‘ನಾನು ಪೀಠಾಧಿಕಾರಿ ಅಲ್ಲ ಸೇವಕ’:

ಉರಿಲಿಂಗ ಪೆದ್ದೀಶ್ವರ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ ‘ಉರಿಲಿಂಗ ಪೆದ್ದೀಶ್ವರ ಮಠಕ್ಕೆ ನಾನು ಪೀಠಾಧಿಕಾರಿ ಅನ್ನೋದಕ್ಕಿಂತ ನಾನೊಬ್ಬ ಸೇವಕನಾಗಿ ಕೆಲಸ ಮಾಡಲು ಸಿದ್ದ. ಅದು ನನಗೆ ಹೆಚ್ಚು ತೃಪ್ತಿ ಕೊಡುತ್ತದೆ. ಪೀಠಾಧಿಕಾರಿಗಿಂತ ಸೇವೆ ಮಾಡುವುದರಲ್ಲಿಯೇ ಹೆಚ್ಚು ಸಂತಸವಿದೆ. ಸೇವೆ ಇದ್ದಲ್ಲಿ ಸನ್ಮಾರ್ಗವಿದೆ. ಮಾನವೀಯತೆ ಗೆಲ್ಲುವಂತಹ ಮಠಗಳು ಹೆಚ್ಚಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.