ADVERTISEMENT

ಅವಳಿ ಪಟ್ಟಣಗಳಲ್ಲಿಲ್ಲ ಸೂಕ್ತ ಉದ್ಯಾನವನ: ವಾಯುವಿಹಾರಕ್ಕೆ ರಸ್ತೆಗಳೇ ಗತಿ

ಜಗನ್ನಾಥ ಡಿ ಶೇರಿಕಾರ, ಚಿಂಚೋಳಿ
Published 28 ಜೂನ್ 2025, 5:40 IST
Last Updated 28 ಜೂನ್ 2025, 5:40 IST
<div class="paragraphs"><p>ಚಿಂಚೋಳಿ ಪಟ್ಟಣಲ್ಲಿ ನೂತನವಾಗಿ ನಿರ್ಮಿಸಿದ ಪುರಸಭೆ ಕಾರ್ಯಾಲಯ</p></div>

ಚಿಂಚೋಳಿ ಪಟ್ಟಣಲ್ಲಿ ನೂತನವಾಗಿ ನಿರ್ಮಿಸಿದ ಪುರಸಭೆ ಕಾರ್ಯಾಲಯ

   

ಚಿಂಚೋಳಿ: ತಾಲ್ಲೂಕು ಕೇಂದ್ರ ಸ್ಥಾನವಾದ ಅವಳಿ‌ ಪಟ್ಟಣ ಒಳಗೊಂಡು ಪುರಸಭೆಯಾಗಿ ಮೇಲ್ದರ್ಜೆಗೇರಿದರೂ ಇಲ್ಲಿನ ನಾಗರಿಕರು ಸುಸಜ್ಜಿತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಸುಮಾರು 30ಸಾವಿರಕ್ಕೂ ಅಧಿಕ‌ ಜನಸಂಖ್ಯೆ ಹೊಂದಿರುವ ಅವಳಿ ಪಟ್ಟಣಗಳು ಒಂದಕ್ಕೊಂದು ಬೆಸೆಯುವಂತೆ ಅಭಿವೃದ್ಧಿ ಹೊಂದುತ್ತಿವೆ. ಆದರೆ ಎರಡೂ ಪಟ್ಟಣಗಳ ನಾಗರಿಕರಿಗೆ ಸೌಲಭ್ಯಗಳೇ ಮರಿಚೀಕೆಯಾಗಿವೆ.

ADVERTISEMENT

ಕೃಷಿಕರು, ಕೃಷಿ ಕಾರ್ಮಿಕರು ಹೆಚ್ಚಾಗಿರುವ ಈ ಅವಳಿ ಪಟ್ಟಣದಲ್ಲಿ ಶಿಕ್ಷಕರು, ಸರ್ಕಾರಿ ನೌಕರರೂ ಇದ್ದಾರೆ. ಇಲ್ಲಿನ ಜನತೆ ದೈನಂದಿನ ಜೀವನದ ಜಂಜಾಟ ಮರೆತು ಪ್ರಶಾಂತ ವಾತಾವರಣದಲ್ಲಿ ಕೆಲಹೊತ್ತು ವಾಯುವಿಹಾರ ನಡೆಸಬೇಕೆಂದರೆ ಎರಡೂ ಪಟ್ಟಣಗಳಲ್ಲಿ ಒಂದೇ ಒಂದು ಸಾರ್ವಜನಿಕ ಉದ್ಯಾನವನವಿಲ್ಲ. ಇದರಿಂದ ಮಹಿಳೆಯರು ವಾಯುವಿಹಾರದಿಂದ ದೂರ ಉಳಿದರೆ, ಯುವಕರು, ಸರ್ಕಾರಿ ನೌಕರರು, ಶಿಕ್ಷಕರು ರಸ್ತೆ ಮೇಲೆಯೇ ವಾಯುವಿಹಾರ ನಡೆಸುವುದು ಅನಿವಾರ್ಯವಾಗಿದೆ.

ಪೊಲೀಸರು, ವೈದ್ಯರು ಮತ್ತು ವಕೀಲರು ವಾಯುವಿಹಾರಕ್ಕಾಗಿ ತಾಲ್ಲೂಕು ಕ್ರೀಡಾಂಗಣ ಅವಲಂಬಿಸಿದ್ದಾರೆ. ಪಟ್ಟಣದಲ್ಲಿ ಹಲವಾರು ಬಡಾವಣೆಗಳು ತಲೆ ಎತ್ತಿವೆ. ಅಲ್ಲಿ ಪಾರ್ಕ್‌ಗೆ ಜಾಗ ಮೀಸಲಿಟ್ಟರೂ ಎಲ್ಲಿಯೂ ಸುಂದರವಾದ ಪಾರ್ಕ್‌ ನೋಡಲು ಸಿಗುವುದಿಲ್ಲ. ಮುಲ್ಲಾಮಾರಿ ನದಿ ದಂಡೆ ಮೇಲಿರುವ ಚಿಂಚೋಳಿ ಹತ್ತಾರು ಶತಮಾನಗಳ ಇತಿಹಾಸ ಹೊಂದಿರುವ ಪುರಾತನ ಪಟ್ಟಣವಾಗಿದೆ. ಇಲ್ಲಿ‌ ಕಿರಿದಾದ ರಸ್ತೆಗಳು, ಅಸಮರ್ಪಕ ಕುಡಿವ ನೀರಿನ ಸೌಲಭ್ಯ, ಸಮುದಾಯ ಶೌಚಾಲಯ ಮತ್ತು ಸರ್ಕಾರಿ ಕಾರ್ಯಕ್ರಮಗಳಿಗೆ ರಂಗ ಮಂದಿರವೂ ಇಲ್ಲದಿರುವುದು ದುರಂತ.

ಚಿಂಚೋಳಿ ಪಟ್ಟಣದಲ್ಲಿ ಕೃಷಿಕರು, ವ್ಯಾಪಾರಿಗಳು ಹೆಚ್ಚಾಗಿದ್ದರೆ, ಚಂದಾಪುರದಲ್ಲಿ ಸರ್ಕಾರಿ ನೌಕರರು ಮತ್ತು ಬೇರೆ ಊರುಗಳಿಂದ ಬಂದು ನೆಲೆಯೂರಿದವರೇ ಹೆಚ್ಚು. ಇವರಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೌಕರ್ಯ ಅಷ್ಟಕಷ್ಟೆ ಎನ್ನುವಂತಾಗಿದೆ. ಇದರಿಂದಾಗಿ ಸರ್ಕಾರಿ ಅಧಿಕಾರಿಗಳು ಜಿಲ್ಲಾ ಕೇಂದ್ರ ಕಲಬುರಗಿಯನ್ನೇ ಆಶ್ರಯಿಸಿದ್ದಾರೆ. ಗುಂಟೆಗಳ ಲೆಕ್ಕದಲ್ಲಿರುವ ಉದ್ಯಾನವನ ಹೆಸರಿಗೆ ಸೀಮಿತವಾಗಿವೆ. ಇವೆಲ್ಲವೂ ಕಾಗದದಲ್ಲಿಯೇ ನೋಡಲು ಸಿಗುತ್ತವೆ ಇದರಿಂದ ಸುಸಜ್ಜಿತ ನಾಗರಿಕ ಸೌಲಭ್ಯಗಳು ಕನಸಾಗಿಯೇ ಪರಿಣಮಿಸಿವೆ.

ಕುಟುಂಬ ಸಮೇತ ತೆರಳಲು ಚಂದ್ರಂಪಳ್ಳಿ ಪ್ರವಾಸಿ ತಾಣ, ಕುಂಚಾವರಂ ಅರಣ್ಯ ಪ್ರದೇಶವಿದೆ. ಆದರೆ ನಿತ್ಯ ಸ್ವಚ್ಚಂದವಾದ ವಾತಾವರಣದಲ್ಲಿ ವಾಯುವಿಹಾರ ನಡೆಸಲು ಉದ್ಯಾನವನ ಇಲ್ಲ. ಪೋಲಕಪಳ್ಳಿ ಬಳಿ ಸಾಲುಮರದ ತಿಮ್ಮಕ್ಕನ ಉದ್ಯಾನವನ ಚಿಂಚೋಳಿ ಪಟ್ಟಣದಿಂದ ಆರು ಮತ್ತು ಚಂದಾಪುರದಿಂದ ನಾಲ್ಕು ಕಿ.ಮೀ ದೂರದಲ್ಲಿರುವುದರಿಂದ ವಾಯುವಿಹಾರಿಗಳಿಂದ ಇದು ಕೂಡ ದೂರವೇ ಉಳಿದಿದೆ. ಅವಳಿ ಪಟ್ಟಣದ ಮಧ್ಯೆ ಸುಸಜ್ಜಿತ ಉದ್ಯಾನವನ ನಿರ್ಮಿಸಿದರೆ ಜನ ಆರೋಗ್ಯಕರ ವಾತಾವರಣದಲ್ಲಿ ನಿತ್ಯ ವಾಯುವಿಹಾರ ನಡೆಸಬಹುದಾಗಿದೆ. ಈ ನಿಟ್ಟಿನಲ್ಲಿ ಪುರಸಭೆ ಹಾಗೂ ಕೆಕೆಆರ್‌ಡಿಬಿ ನಾಗರಿಕರಿಗೆ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. 

ಬಡಾವಣೆಗಳಲ್ಲಿ ಪಾರ್ಕ್‌ ನಿರ್ಮಾಣಕ್ಕೆ ಜಾಗ ಮೀಸಲಿರಿಸಲಾಗಿದೆ. ಆದರೆ ಅವುಗಳನ್ನು ಅಭಿವೃದ್ಧಿ ಪಡಿಸಿಲ್ಲ. ಮುಂದಿನ ದಿನಗಳಲ್ಲಿ ಹಣಕಾಸಿನ ಲಭ್ಯತೆ ಆಧರಿಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು
ಕಾಶಿನಾಥ ಧನ್ನಿ ಮುಖ್ಯಾಧಿಕಾರಿ ಪುರಸಭೆ ಚಿಂಚೋಳಿ
ಸಾಲುಮರದ ತಿಮ್ಮಕ್ಕನ ಉದ್ಯಾನವನ ಪೂರ್ಣಗೊಳಿಸಲು ಆದ್ಯತೆ ನೀಡುವೆ. ಪುರಸಭೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪಾರ್ಕ್‌ಗಳ‌ ಜಾಗ ಖಾತ್ರಿ ಪಡಿಸಿಕೊಂಡು ಅನುದಾನ ಒದಗಿಸಲು ಕ್ರಮ ಕೈಗೊಳ್ಳುವೆ
ಡಾ.ಅವಿನಾಶ ಜಾಧವ, ಶಾಸಕ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.