ADVERTISEMENT

ವೆಂಟಿಲೇಟರ್‌, ಬೆಡ್‌ಗಳ ಕೊರತೆ ಇಲ್ಲ: ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 12:59 IST
Last Updated 6 ಅಕ್ಟೋಬರ್ 2020, 12:59 IST
ವಿ.ವಿ. ಜ್ಯೋತ್ಸ್ನಾ
ವಿ.ವಿ. ಜ್ಯೋತ್ಸ್ನಾ   

ಕಲಬುರ್ಗಿ: ‘ಕೊರೊನಾ ವೈರಾಣು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಸರ್ಕಾರಿ ಅಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ದು, ವೆಂಟಿಲೇಟರ್ ಅಥವಾ ಹಾಸಿಗೆಗಳ ಕೊರತೆ ಇಲ್ಲ’ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.

‘ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಜಿಲ್ಲೆಯಲ್ಲಿ 92 ವೆಂಟಿಲೇಟರ್‌ಗಳಿದ್ದು, ಇದರಲ್ಲಿ ಪ್ರಸ್ತುತ 12 ವೆಂಟಿಲೇಟರ್‌ಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 80 ವೆಂಟಿಲೇರ್‌ಗಳು ಕೂಡ ಸೇವೆಗೆ ಸಿದ್ಧ ಇವೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಶೇಕಡ 20ರಷ್ಟು ಖಾಲಿ ಹಾಸಿಗೆ ಸಹ ಲಭ್ಯಗಳಿವೆ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಲಕ್ಷಣಗಳು ಇಲ್ಲದ ಸೋಂಕಿತರಿಗೆ ಜಿಲ್ಲೆಯ 8 ಕಡೆಗಳಲ್ಲಿ ತೆರೆದ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ ದಿನದಲ್ಲಿ ಸೋಂಕಿನ ತೀವ್ರತೆ ಕಂಡುಬಂದಲ್ಲಿ ಇನ್ನೂ 20 ಕೋವಿಡ್ ಕೇರ್ ಕೇಂದ್ರ ತೆರೆಯಲು ಸ್ಥಳ ಗುರುತಿಸಲಾಗಿದೆ’ ಎಂದರು.

ADVERTISEMENT

‘ಸಾರ್ವಜನಿಕರು ಸೋಂಕಿನ ತೀವ್ರತೆ ಅರಿತು ನಡೆಯಬೇಕು. ಇದನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಕೊರೊನಾದಿಂದ ದೂರ ಉಳಿಯಬೇಕಾದರೆ ಅಂತರ ಪಾಲನೆ, ಸ್ಯಾನಿಟೈಸ್ ಬಳಕೆ ಹಾಗೂ ಮಾಸ್ಕ್‌ ಧರಿಸುವುದು ಕಡ್ಡಾಯ’ ಎಂದೂ ಎಚ್ಚರಿಸಿದರು.

‘ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೊರೊನಾ ವೈರಾಣು ಪತ್ತೆ ಪ್ರಯೋಗಾಲಯ ತೆರೆಯುವ ಪ್ರಕ್ರಿಯೆ ಮುಂದುವರಿದಿದೆ. ಈ ಹಿಂದೆ ಲ್ಯಾಬ್‌ಗಾಗಿ ₹ 80 ಲಕ್ಷ ಬಿಡುಗಡೆ ಮಾಡಲಾಗಿದೆ. ಇನ್ನೂ ₹ 10 ಲಕ್ಷ ಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಅದನ್ನು ಕೂಡ ಶೀಘ್ರ ಪೂರೈಸಲಾಗುವುದು. ಮುಂದಿನ ವಾರದಲ್ಲಿ ಲ್ಯಾಬ್‌ ಆರಂಭವಾಗುವ ಸಾಧ್ಯತೆ ಇದೆ’ ಎಂದು ಅವರು ಪ‍್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ಲಾಸ್ಮಾ ತೆರಫಿಗೆ ಉತ್ತೇಜನ ನೀಡಲು ಕೆಕೆಆರ್‌ಡಿಬಿಯಿಂದ ₹ 1 ಕೋಟಿ ಅನುದಾನ ನೀಡಿದ್ದರೂ ಈ ಪ್ರಕ್ರಿಯೆ ಏಕೆ ಆರಂಭವಾಗಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇದರ ಪ್ರಕ್ರಿಯೆಗಳೂ ಚುರುಕಾಗಿ ನಡೆದಿವೆ’ ಎಂದರು.

ಸೋಂಕಿತರಿಗೆಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ

ಕಲಬುರ್ಗಿ:ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ,ಕೋವಿಡ್ಸೋಂಕಿತರು ಕೂಡ ಮತದಾನ ಮಾಡಲು ಅನುಕೂಲ ಆಗುವಂತೆ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡಲಾಗಿದೆ’ ಎಂದು ವಿ.ವಿ.ಜ್ಯೋತ್ಸ್ನಾ ತಿಳಿಸಿದರು.

‘ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸಕಲ ಸಿದ್ಧತೆಗಳು ನಡೆದಿವೆ. ಈ ಪೋಸ್ಟಲ್‌ ಬ್ಯಾಲೆಟ್‌ಗಳನ್ನು ಹೋಂ ಕ್ವಾರಂಟೈನ್‌ನಲ್ಲಿ ಇದ್ದವರು ಹಾಗೂ ಅಂಗವಿಕಲ ಮತದಾರರು ಕೂಡ ಬಳಸಿಕೊಳ್ಳಬಹುದು’ ಎಂದರು.

‘ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ದೂರು ಮತ್ತು ಕುಂದು ಕೊರತೆಗಳಿಗಾಗಿ ಸಹಾಯವಾಣಿ 08472 278602 ತೆರೆಯಲಾಗಿದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ಸಭೆ– ಸಮಾರಂಭ, ವಾಹನ ಬಳಕೆಗೆ ಅನುಮತಿ ಪಡೆಯಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏಕ ಗವಾಕ್ಷಿ ಕೇಂದ್ರ ತೆರೆದು ಸಿಬ್ಬಂದಿ ನೇಮಿಸಿದ್ದು, ಇಲ್ಲಿ ಅನುಮತಿ ಪಡೆಯಬಹುದು’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾರ್ಜ್‌, ಡಿಸಿಪಿ ಕಿಶೋರ ಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.