ADVERTISEMENT

ಫೆ.2ರಿಂದ ಬೌದ್ಧ ಧರ್ಮದ ಧಮ್ಮಯಾತ್ರೆ: ಆರ್.ಕೆ. ಬೇಗಾರ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 6:02 IST
Last Updated 30 ಜನವರಿ 2026, 6:02 IST
ಆರ್.ಕೆ. ಬೇಗಾರ
ಆರ್.ಕೆ. ಬೇಗಾರ   

ಕಲಬುರಗಿ: ‘ಥಾಯ್‌ ಸನ್ಯಾಸಿ ಸಂಘದ ವತಿಯಿಂದ ನಗರದ ಸಿದ್ಧಾರ್ಥ ಬುದ್ಧ ವಿಹಾರದಿಂದ ತೆಲಂಗಾಣದ ಬುದ್ಧವನಂ ವರೆಗೆ ಬೌದ್ಧ ಧರ್ಮದ ಧಮ್ಮಯಾತ್ರೆ–3 ಹಮ್ಮಿಕೊಂಡಿದ್ದು, ಫೆ.2ರಂದು ಆರಂಭವಾಗಲಿದೆ’ ಎಂದು ಸಿದ್ಧಾರ್ಥ ವಿಹಾರ ಟ್ರಸ್ಟ್‌ ಆಡಳಿತಾಧಿಕಾರಿ ಆರ್.ಕೆ. ಬೇಗಾರ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶ್ವದಲ್ಲಿ ಶಾಂತಿ ಸಂದೇಶ ಸಾರುವ ನಿಟ್ಟಿನಲ್ಲಿ ಧಮ್ಮಯಾತ್ರೆ ನಡೆಯುತ್ತಿದೆ. ಈ ಮೊದಲು ಪರಭಣಿಯಿಂದ ಬಾಬಾಸಾಹೇಬರ ಚೈತ್ಯಭೂಮಿ, ನಾಗಪುರದಿಂದ ಲಡಾಕ್‌ವರೆಗೆ ಧಮ್ಮಯಾತ್ರೆಗಳು ನಡೆದಿವೆ. ಬುದ್ಧ ವಿಹಾರ ಸಂಸ್ಥಾಪಕ ಅಧ್ಯಕ ಮಲ್ಲಿಕಾರ್ಜುನ ಖರ್ಗೆ ಅವರ ಹಿತಾಸಕ್ತಿಯಿಂದ ಮೂರನೇ ಪಾದಯಾತ್ರೆಯನ್ನು ಕಲಬುರಗಿಯಿಂದ ಬುದ್ಧವನಂ ವರೆಗೆ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಫೆ.1ರಂದು ಸಂಜೆ 6 ಗಂಟೆಗೆ ಬುದ್ಧ ವಿಹಾರದ ಬಯಲು ರಂಗಮಂದಿರದಲ್ಲಿ ಧಮ್ಮ ಯಾತ್ರೆಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಟ್ರಸ್ಟ್‌ ಅಧ್ಯಕ್ಷ ರಾಹುಲ್ ಖರ್ಗೆ, ಬೌದ್ಧ ಬಿಕ್ಕುಗಳು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಪಾದಯಾತ್ರೆಯಲ್ಲಿ ಥೈಲ್ಯಾಂಡ್ ದೇಶದ 50 ಬೌದ್ಧ ಬಿಕ್ಕುಗಳು ಹಾಗೂ ಸ್ಥಳೀಯ ಬಿಕ್ಕುಗಳು ಪಾಲ್ಗೊಳ್ಳಲಿದ್ದಾರೆ. ಫೆ.2ರಂದು ಬೆಳಿಗ್ಗೆ 9.30ಕ್ಕೆ ಬುದ್ಧ ವಿಹಾರದಿಂದ ಪಾದಯಾತ್ರೆ ಆರಂಭವಾಗಲಿದ್ದು, ಜಗತ್ ವೃತ್ತ, ಸೂಪರ್ ಮಾರ್ಕೆಟ್‌, ಕಪನೂರ, ಉಪಳಾಂವ ಮಾರ್ಗವಾಗಿ ಹಾದು ಹೋಗುತ್ತದೆ. ಮಾರ್ಚ್‌ 3ರಂದು ತೆಲಂಗಾಣದ ಬುದ್ಧವನಂ ತಲುಪಲಿದೆ. ಪಾದಯಾತ್ರೆಯಲ್ಲಿ ಬುದ್ಧನ ಪವಿತ್ರ ಅಸ್ತಿ ದರ್ಶನಕ್ಕೆ ಅವಕಾಶ ಇರುತ್ತದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಮರಾವ್‌ ಸೂರನ್, ಭೀಮರಾವ ಟಿ.ಟಿ., ಮಹಾಂತಪ್ಪ ಸಂಗಾವಿ, ಬಾಬು ವಂಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.