ADVERTISEMENT

ಚಿಂಚೋಳಿ: ನೀರಿನ ಘಟಕ ನಿರ್ವಹಣೆಯ ಭಗೀರಥರು ಇವರು

8 ವರ್ಷದಿಂದ ಯಶಸ್ವಿ ನಿರ್ವಹಣೆ * ವರಮಾನ ದೇಗುಲ ಅಭಿವೃದ್ಧಿ, ಗ್ರಂಥಾಲಯ ಸ್ಥಾಪನೆಗೆ ಬಳಕೆ

ಜಗನ್ನಾಥ ಡಿ.ಶೇರಿಕಾರ
Published 13 ಫೆಬ್ರುವರಿ 2026, 7:52 IST
Last Updated 13 ಫೆಬ್ರುವರಿ 2026, 7:52 IST
ಚಿಂಚೋಳಿ ತಾಲ್ಲೂಕಿನ ಹಸರಗುಂಡಗಿ ಗ್ರಾಮದ ವೀರಭದ್ರೇಶ್ವರ ಗೆಳೆಯರ ಬಳಗದ ಸೇವಾ ಸಂಸ್ಥೆಯ ಕುಡಿವ ನೀರಿನ ಘಟಕದಿಂದ ಶುದ್ಧ ಕುಡಿಯುವ ನೀರನ್ನು ಕ್ಯಾನ್‌ಗೆ ತುಂಬಿಕೊಳ್ಳುತ್ತಿರುವುದು
ಚಿಂಚೋಳಿ ತಾಲ್ಲೂಕಿನ ಹಸರಗುಂಡಗಿ ಗ್ರಾಮದ ವೀರಭದ್ರೇಶ್ವರ ಗೆಳೆಯರ ಬಳಗದ ಸೇವಾ ಸಂಸ್ಥೆಯ ಕುಡಿವ ನೀರಿನ ಘಟಕದಿಂದ ಶುದ್ಧ ಕುಡಿಯುವ ನೀರನ್ನು ಕ್ಯಾನ್‌ಗೆ ತುಂಬಿಕೊಳ್ಳುತ್ತಿರುವುದು   

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಹಸರಗುಂಡಗಿ ಗ್ರಾಮದ ಯುವಕರ ತಂಡವು ಯಾರ ನೆರವಿಗೂ ಕಾಯದೇ  8 ವರ್ಷಗಳಿಂದ ಸಾರ್ವಜನಿಕ ನೀರಿನ ಘಟಕವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದೆ.

ಈ ಮೂಲಕ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಒತ್ತುನೀಡಿದೆ. ಘಟಕದಿಂದ ಬಂದ ಲಾಭವನ್ನು ಗ್ರಾಮದ ವೀರಭದ್ರೇಶ್ವರ ದೇಗುಲದ ಅಭಿವೃದ್ಧಿ, ಬಯಲು ಗ್ರಂಥಾಲಯ ನಡೆಸಲು ಬಳಸುತ್ತಿದೆ. 

ತಾಲ್ಲೂಕಿನಲ್ಲಿ 90ಕ್ಕೂ ಹೆಚ್ಚು ಕುಡಿಯುವ ನೀರಿನ ಶುದ್ಧೀಕರಣ ಘಟಕಗಳಿವೆ. ಈ ಪೈಕಿ ಅರ್ಧಕ್ಕೂ ಹೆಚ್ಚು ಘಟಕಗಳು ಕೆಟ್ಟಿವೆ. ಹಸರಗುಂಡಗಿ ಗ್ರಾಮದ ಘಟಕ ಇದಕ್ಕೆ ಅಪವಾದ.

ADVERTISEMENT

8 ವರ್ಷಗಳ ಹಿಂದೆ ಸ್ಥಾಪನೆಯಾದ ಈ ನೀರಿನ ಶುದ್ಧೀಕರಣ ಘಟಕವನ್ನು ಅದೇ ಗ್ರಾಮದ ವೀರಭದ್ರೇಶ್ವರ ಗೆಳೆಯರ ಬಳಗ ಸೇವಾ ಸಂಸ್ಥೆ ನಿರ್ವಹಣೆ ಜತೆಗೆ, ಇತರೆ ಅಭಿವೃದ್ದಿಗೂ ಬಳಸಲು ಮುಂದಾಗಿದೆ.

ಹಸರಗುಂಡಗಿ ಗ್ರಾಮ, ಸುತ್ತಲಿನ ತಾಂಡಾಗಳವರು ಬೈಕ್‌ನಲ್ಲಿ ಬಂದು ಕ್ಯಾನ್‌ಗಳಲ್ಲಿ ನೀರು ಒಯ್ಯುತ್ತಿದ್ದಾರೆ.  ‘ಕಲ್ಯಾಣ ಕರ್ನಾಟಕದ ಭಾಗದಲ್ಲಿ ಫ್ರಿಜ್ ಅಳವಡಿಸಿರುವ,  ಯಶಸ್ವಿಯಾಗಿ ಮುನ್ನಡೆಯುತ್ತಿರುವ ಏಕೈಕ ಘಟಕ ತಮ್ಮದಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಸುರೇಶ ಬಿ.ರೆಡ್ಡಿ ವಡ್ಡನಕೇರಿ ಹೆಮ್ಮೆಯಿಂದ ಹೇಳುತ್ತಾರೆ.

ಘಟಕ ನಿರ್ವಹಣೆಗೆ ಗ್ರಾಮದ ಸಂತೋಷ ಸ್ವಾಮಿ ಅವರನ್ನು ನಿಯೋಜಿಸಿರುವ ಸಂಸ್ಥೆಯು, ಇವರಿಗೆ ಮಾಸಿಕ ₹6 ಸಾವಿರ ಗೌರವಧನವನ್ನು ನೀಡುತ್ತಿದೆ. 2023ರವರೆಗೆ ಮಾಸಿಕ ₹400ರಿಂದ ₹500 ವಿದ್ಯುತ್ ಬಿಲ್ ಬರುತ್ತಿತ್ತು. 2023ರ ನಂತರದಿಂದ ₹1600ರಿಂದ ₹1800 ಬರುತ್ತಿದೆ. ಇದನ್ನೂ ಸಂಸ್ಥೆಯೇ ಭರಿಸುತ್ತಿದೆ.

‘ಶುದ್ಧ ನೀರು ವಿತರಣೆಯಿಂದ ಬಂದ ಆದಾಯದಲ್ಲಿ ವೀರಭದ್ರೇಶ್ವರ ದೇವಾಲಯಕ್ಕೆ 30 ಎಲ್‌ಇಡಿ ಬಲ್ಬ್ ಹಾಗೂ 2 ಫೋಕಸ್ ಬಲ್ಬ್, ವೀರಭದ್ರೇಶ್ವರ ದೇವಾಲಯದ ಗರ್ಭಗುಡಿ ಎದುರು ಭಕ್ತರ ಅನುಕೂಲಕ್ಕಾಗಿ ಎಸ್‌ಎಸ್ ಗ್ರಿಲ್ ಅಳವಡಿಸಲಾಗಿದೆ. ವೀರಭದ್ರೇಶ್ವರ ದೇವಾಲಯದಲ್ಲಿ ಬಯಲು ಗ್ರಂಥಾಲಯ ನಡೆಸುವ ಸಮಾಜ ಮುಖಿ ಸೇವೆ ಸಲ್ಲಿಸಲಾಗುತ್ತಿದೆ’ ಎಂದು ಸೇವಾ ಸಂಸ್ಥೆಯ ಖಜಾಂಚಿ ಅಶೋಕ ಕೋರಿ ತಿಳಿಸಿದರು.

ಇನ್ವರ್ಟರ್ ಅಳವಡಿಕೆ

ಫ್ರಿಜ್‌ ಸೌಲಭ್ಯ  ವಿದ್ಯುತ್ ವ್ಯತ್ಯಯವಾಗಿರುವ ಅವಧಿಯಲ್ಲೂ ನೀರು ಲಭಿಸುವಂತಾಗಲು ಇನ್ವರ್ಟರ್ ಅನ್ನು ಘಟಕದಲ್ಲಿ ಅಳವಡಿಸಲಾಗಿದೆ. ಶುದ್ಧೀಕರಿಸಿದ ನೀರು ತಂಪಾಗಿರಿಸಲು 2 ಟನ್ ಸಾಮರ್ಥ್ಯದ ಫ್ರಿಜ್ ಅನ್ನು ಖರೀದಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಶೆಡ್ ನಿರ್ಮಿಸಲಾಗಿದೆ. 100 ಸಾಮಾನ್ಯ ಕ್ಯಾನ್ ನೀರು ತಂಪಾಗಿರುವ 100 ಕ್ಯಾನ್‌ ಖರೀದಿಸಿ ತಂದು ಗ್ರಾಮೀಣ ಜನರಿಗೆ ಸೇವೆ ಒದಗಿಸಲಾಗುತ್ತಿದೆ. ಹೀಗೆ ಹಲವು ಪ್ರಯತ್ನಗಳು ಯಶ ಕಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.