ADVERTISEMENT

ವಿದ್ಯಾರ್ಥಿ ಕೊಲೆ; ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2022, 15:56 IST
Last Updated 16 ನವೆಂಬರ್ 2022, 15:56 IST

ಕಲಬುರಗಿ: ನಗರದ ಛೋಟಾ ರೋಜಾ ಬಡಾವಣೆಯಲ್ಲಿ ಮಂಗಳವಾರ ಸಂಜೆ ವಿದ್ಯಾರ್ಥಿ ಮೇಲೆ ಮಾರಕಾಸ್ತ್ರಗಳಿಂದಹಲ್ಲೆ ನಡೆಸಿ, ಕೊಲೆ ಮಾಡಿದ ಪ್ರಕರಣವನ್ನು ರೋಜಾ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಭೇದಿಸಿ, ಮೂವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.

ವಿದ್ಯಾರ್ಥಿ ಮಹಮ್ಮದ್ ಮುದ್ದಸೀರ್(19) ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಪ್ರಕರಣ ಸಂಬಂಧ ಛೋಟಾ ರೋಜಾ ಬಡಾವಣೆ ನಿವಾಸಿ ಶೇಖ್ ಆಮೀರ್(21), ವಿದ್ಯಾರ್ಥಿ ಸೈಯದ್ ಯಾಸೀನ್(19) ಮತ್ತು ಕಿಟಕಿ ಕೆಲಸ ಮಾಡುತ್ತಿದ್ದ ಮಹಮ್ಮದ್ ಕಮ್ರನ್(22) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ಮುದ್ದಸೀರ್ ಅವರ ದೊಡ್ಡಪ್ಪನ ಮಗಳನ್ನು ಬಂಧಿತ ಆರೋಪಿ ಆಮೀರ್ ಎಂಬಾತ ಪ್ರೀತಿಸುತ್ತಿದ್ದ. ಮದುವೆ ಆಗುವುದಾಗಿ ಸಹ ಹೇಳುತ್ತಿದ್ದ. ಹುಡುಗಿಯ ತಂಟೆಗೆ ಬರಬೇಡ ಎಂದು ಆಮೀರ್‌ಗೆ ಎಚ್ಚರಿಕೆ ಸಹ ನೀಡಲಾಗಿತ್ತು. ಆದರೂ ಆಗಾಗ ಚುಡಾಯಿಸುತ್ತಿದ್ದ. ಈ ಬಗ್ಗೆ ಕಳೆದ ಕೆಲವು ದಿನಗಳ ಹಿಂದೆ ಆರೋಪಿಯ ಜತೆ ಜಗಳವಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಹಳೆಯ ವೈಷಮ್ಯದಿಂದ ಮಂಗಳವಾರ ಸಂಜೆ ಆಮೀರ್ ತನ್ನ ಸ್ನೇಹಿತರ ಜತೆ ಸೇರಿ ಛೋಟಾ ರೋಜಾ ಬಡಾವಣೆಯ ಬೌವುಲಿ ಗಲ್ಲಿಯಲ್ಲಿ ಮುದ್ದಸೀರ್ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದ್ದರು‌. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮುದ್ದಸೀರ್‌ನನ್ನು ಮಣೂರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಫಲಿಸದೆ ಮೃತಪಟ್ಟ ಎಂದಿದ್ದಾರೆ.

ರೋಜಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.