ADVERTISEMENT

ನಾಟಕೋತ್ಸವ ಪ್ರವೇಶ ಧನಕ್ಕೆ ರಂಗಾಸಕ್ತರ ವಿರೋಧ

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 14:47 IST
Last Updated 21 ಜನವರಿ 2023, 14:47 IST
ಶಂಕ್ರಯ್ಯ ಘಂಟಿ
ಶಂಕ್ರಯ್ಯ ಘಂಟಿ   

ಕಲಬುರಗಿ: ಇದೇ 26ರಿಂದ ರಂಗ ತೋರಣ ಸಂಸ್ಥೆಯು ನಗರದಲ್ಲಿ ಆಯೋಜಿಸಿರುವ ನಾಟಕೋತ್ಸವಕ್ಕೆ ಸರ್ಕಾರಿ ಸ್ವಾಮ್ಯದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಸಹಯೋಗ ಪಡೆದರೂ ಪ್ರೇಕ್ಷಕರಿಗೆ ₹ 250 ಪ್ರವೇಶ ಧನ ನಿಗದಿ ಮಾಡಿದ್ದಕ್ಕೆ ಜಿಲ್ಲೆಯ ರಂಗಾಸಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರಂಗ ನಿರ್ದೇಶಕ ಶಂಕ್ರಯ್ಯ ಘಂಟಿ, ರಂಗಾಸಕ್ತರಾದ ಎಂ.ಬಿ. ಸಜ್ಜನ, ಪ್ರೊ.ಪಿ.ಬಿ. ಸಂತಪ್ಪನವರ, ಕಿರಣ ಪಾಟೀಲ, ರಾಘವೇಂದ್ರ ಹಳೆಪ್ಯಾಟಿ, ಅಶೋಕ ಚಿತ್ಕೋಟಿ, ಆದರ್ಶ ಕಾಳಗಿ, ‘ನಾಟಕೋತ್ಸವದ ಆಯೋಜಕರು ಟಿಕೆಟ್ ನಿಗದಿಪಡಿಸದಿದ್ದರೆ ಜನರು ಬರುವುದಿಲ್ಲ ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ. ಸಾಂಸ್ಕೃತಿಕ ಸಂಘಟನೆಯ ನೆರವಿನಿಂದ ಇಡೀ ನಾಟಕೋತ್ಸವದ ಖರ್ಚು ಭರಿಸಲು ಆಗುವುದಿಲ್ಲ ಎಂದಾದರೆ ಎರಡೇ ದಿನ ಉತ್ಸವ ಮಾಡಲಿ’ ಎಂದು ಸಲಹೆ ನೀಡಿದ್ದಾರೆ.

‘ಇತ್ತೀಚೆಗೆ ಕಲಬುರಗಿ ರಂಗಾಯಣದಿಂದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ್ದ ನಾಟಕೋತ್ಸವಕ್ಕೆ ಕಿಕ್ಕಿರಿದು ಜನ ಸೇರಿದ್ದರು. ಬೆಂಗಳೂರಿನಲ್ಲಿ ಟಿಕೆಟ್ ಪಡೆದು ನಾಟಕ ನೋಡುತ್ತಾರೆ ಎಂದರೆ ಅಲ್ಲಿಯೇ ಆಯೋಜಿಸಲಿ’ ಎಂದು ಹೇಳಿದ್ದಾರೆ.

ADVERTISEMENT

‘ತೊಗರಿ ಬೆಳೆಯ ನೆಟೆರೋಗದಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ರೈತರ ನೆರವಿಗೆ ಬರುವುದು ಬಿಟ್ಟು ನಾಟಕೋತ್ಸವಕ್ಕೆ ಹಣಕಾಸು ನೆರವು ನೀಡುವ ಮೂಲಕ ಹಣ ದುರ್ಬಳಕೆ ಮಾಡುತ್ತಿದೆ. ಈ ಬಗ್ಗೆ ಅಧಿಕಾರಿಗಳು ಉತ್ತರಿಸಬೇಕಾಗುತ್ತದೆ. ಅಲ್ಲದೇ ಸಂಘವು ಈ ಕುರಿತು ಸ್ಪಷ್ಟನೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.