ADVERTISEMENT

‘ಹನುಮಾನ್ ಚಾಲೀಸಾ ಕೇಂದ್ರ ಸ್ಥಾಪಿಸಿ’

ಮೂರು ಮಕ್ಕಳಿಗೆ ಜನ್ಮ ನೀಡಲು ತೊಗಾಡಿಯಾ ಕರೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 15:42 IST
Last Updated 18 ಜೂನ್ 2025, 15:42 IST
ಜೇವರ್ಗಿ ಪಟ್ಟಣದ ಸಜ್ಜನ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಹಿಂದೂ ಧರ್ಮಸಭೆಯನ್ನು ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಪ್ರವೀಣ ತೊಗಾಡಿಯಾ ಉದ್ಘಾಟಿಸಿದರು 
ಜೇವರ್ಗಿ ಪಟ್ಟಣದ ಸಜ್ಜನ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಹಿಂದೂ ಧರ್ಮಸಭೆಯನ್ನು ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಪ್ರವೀಣ ತೊಗಾಡಿಯಾ ಉದ್ಘಾಟಿಸಿದರು    

ಜೇವರ್ಗಿ: ‘ಚರ್ಚ್‌ಗಳು ಕ್ರೈಸ್ತರನ್ನು, ಮಸೀದಿಗಳು ಮುಸ್ಲಿಮರನ್ನು ಒಗ್ಗೂಡಿಸುವ ಕೇಂದ್ರಗಳಾಗಿವೆ. ಅದೇ ರೀತಿ ಹಿಂದೂಗಳನ್ನು ಒಗ್ಗೂಡಿಸಲು ಹನುಮಾನ್ ಚಾಲೀಸಾ ಕೇಂದ್ರಗಳನ್ನು ಸ್ಥಾಪಿಸಬೇಕು’ ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಪ್ರವೀಣ ತೊಗಾಡಿಯಾ ಹೇಳಿದರು.

ಪಟ್ಟಣದ ಸಜ್ಜನ್ ಕಲ್ಯಾಣ ಮಂಟಪದಲ್ಲಿ ಬುಧವಾರ ಅಂತರರಾಷ್ಟ್ರೀಯ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಬಜರಂಗದಳದಿಂದ ಹಮ್ಮಿಕೊಂಡಿದ್ದ ಹಿಂದೂ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದೂಗಳ ರಕ್ಷಣೆ, ಸಮೃದ್ಧಿಗಾಗಿ ದೇಶದ ಪ್ರತಿ ಹಳ್ಳಿ, ಪಟ್ಟಣದಲ್ಲಿ ಹನುಮಾನ್ ಚಾಲೀಸಾ ಕೇಂದ್ರ ಸ್ಥಾಪಿಸಿ, ಪ್ರತಿ ಶನಿವಾರ ಆ ಕೇಂದ್ರಗಳಲ್ಲಿ ಪಠಣ ಮಾಡಬೇಕು. ಈ ಕೇಂದ್ರಗಳಿಂದ ಬಡ ಹಿಂದೂಗಳಿಗೆ ಆಹಾರ, ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ದೊರೆಯುವಂತಾಗಬೇಕು’ ಎಂದರು.

ADVERTISEMENT

ಸಶಕ್ತ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಹಿಂದೂ ದಂಪತಿ ಮೂರು ಮಕ್ಕಳಿಗೆ ಜನ್ಮ ನೀಡಬೇಕು. ಹಿಂದೂಗಳ ಸಂಖ್ಯೆ ಹೆಚ್ಚಳವಾಗಬೇಕಿದ್ದು, ಅವರ ಸುರಕ್ಷತೆಯೇ ನಮ್ಮ ಮುಖ್ಯ ಧ್ಯೇಯ. ಮೂರು ಮಕ್ಕಳನ್ನು ಹೆರುವ ದಂಪತಿಗೆ ಸನ್ಮಾನಿಸಲಾಗುವುದು. ಮೂರನೇ ಮಗುವಿನ ಶೈಕ್ಷಣಿಕ ಜವಾಬ್ದಾರಿಯನ್ನು ಪರಿಷತ್ತು ವಹಿಸಿಕೊಳ್ಳಲಿದೆ ಎಂದರು.

‘ಸಮೃದ್ಧ, ಸುರಕ್ಷಿತ, ಸನ್ಮಾನಿತ ಹಾಗೂ ಸ್ವಾಸ್ಥ್ಯ ಹಿಂದೂ ನನ್ನ ಸಂಕಲ್ಪ. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಹಿಂದೂ ಪರಿಷತ್‌ ಕಾರ್ಯ ನಿರ್ವಹಿಸುತ್ತಿದೆ. ದೌರ್ಜನ್ಯ ಸೇರಿದಂತೆ ಯಾವುದೇ ಸಮಸ್ಯೆಗೆ ಸಿಲುಕುವ ಹಿಂದುಗಳಿಗಾಗಿ ದೇಶದಾದ್ಯಂತ ಸಹಾಯವಾಣಿ ಆರಂಭಿಸಲಾಗಿದೆ. ಆನ್‌ಲೈನ್ ಮೂಲಕವೂ ಸಮಸ್ಯೆ ಹೇಳಿಕೊಳ್ಳಬಹುದು. ಕಾನೂನು ನೆರವಿಗೆ ಅಡ್ವೊಕೇಟ್ ಹೆಲ್ಪ್‌ಲೈನ್‌ ಸಹ ಆರಂಭಿಸಲಾಗಿದೆ. ಸ್ವಾಸ್ಥ್ಯ ಹಿಂದೂಗಾಗಿ, 10 ಸಾವಿರ ಖಾಸಗಿ ಹಿಂದೂ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.

‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಶೇ 86ರಷ್ಟು ಹಿಂದೂಗಳಿದ್ದರು. ಈಗ ಅದು ಶೇ 78ಕ್ಕೆ ಇಳಿಕೆಯಾಗಿದೆ. ಆದರೆ, ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿದೆ. ಹಿಂದೂಗಳ ಬಹುತ್ವಕ್ಕಾಗಿ ಜನಸಂಖ್ಯೆ ಹೆಚ್ಚಳದ ಕಾನೂನು ಜಾರಿಯಾಗಬೇಕು. ಬಾಂಗ್ಲಾದ ನುಸುಳುಕೋರರನ್ನು ಓಡಿಸಬೇಕು’ ಎಂದರು.

ಸಾನ್ನಿಧ್ಯ ವಹಿಸಿದ್ದ ತೊನಸನಹಳ್ಳಿಯ ಮಲ್ಲಣಪ್ಪ ಸ್ವಾಮೀಜಿ, ‘ಹಿಂದೂಗಳನ್ನು ಒಗ್ಗೂಡಿಸುವ ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ವಿಮಾನ ಅಪಘಾತದಲ್ಲಿ ಭಗವದ್ಗೀತೆ ಉಳಿದಿದೆ ಎಂದರೇ ಇದರ ಅರ್ಥ ಹಿಂದೂಧರ್ಮವನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.

ಗಂವ್ಹಾರದ ಸೋಪಾನನಾಥ ಸ್ವಾಮೀಜಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಹಿಂದೂ ಪರಿಷತ್ ರಾಜ್ಯಾಧ್ಯಕ್ಷ ರಮೇಶ್ ಕುಲಕರ್ಣಿ, ರಾಜ್ಯ ಕಾರ್ಯದರ್ಶಿ ಶಂಭುನಾಥ ಆಲಬಾಳ, ಉತ್ತರ ಕರ್ನಾಟಕ ಭಜರಂಗದಳ ಅಧ್ಯಕ್ಷ ಗಂಗಾಧರ ವಿಶ್ವಕರ್ಮ, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಆದ್ವಾನಿ, ತಾಲ್ಲೂಕು ಅಧ್ಯಕ್ಷ ಮಾಣಿಕ್ಯ ಕೆಲ್ಲೂರ, ಪರಿಷತ್ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಜೈನಾಪೂರ, ನಾಗರಾಜ ಓಂ,‌ ಲಕ್ಷ್ಮೀಕಾಂತ ಕುಲಕರ್ಣಿ ಹೋತಿನಮಡು, ಈಶ್ವರ ಹಿಪ್ಪರಗಿ, ಆನಂದ ದೇಸಾಯಿ, ಪ್ರಶಾಂತಗೌಡ ಜೈನಾಪೂರ, ಹಳ್ಳೆಪ್ಪಚಾರ್ಯ ಜೋಶಿ, ಕಲ್ಯಾಣಕುಮಾರ್ ಸಂಗಾವಿ, ಕಂಠೆಪ್ಪ ಹರವಾಳ, ರೇವಣಸಿದ್ದಪ್ಪ ಸಂಕಾಲಿ, ಸುರೇಶ ಕಟ್ಟಿಸಂಗಾವಿ, ಅಂಬರೀಶ್ ಪತಂಗೆ, ಭೀಮಾಶಂಕರ ಯಲಗೋಡ, ನಿತೀನ್ ಸಾವಜಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಮಲ್ಲಿಕಾರ್ಜುನ ಆದ್ವಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೀಕಾಂತ ಕುಲಕರ್ಣಿ ಸ್ವಾಗತಿಸಿದರು. ಸಂದೀಪಸಿಂಗ್ ಠಾಕೂರ ನಿರೂಪಿಸಿದರು. ನಾಗರಾಜ ಓಂ ವಂದಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.