ADVERTISEMENT

ಬೆಂಬಲ ಬೆಲೆ ಸದುಪಯೋಗ ಪಡೆದುಕೊಳ್ಳಿ: ಶಾಸಕ ಎಂ.ವೈ.ಪಾಟೀಲ್

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2025, 4:09 IST
Last Updated 12 ಮಾರ್ಚ್ 2025, 4:09 IST
ಅಫಜಲಪುರ ತಾಲ್ಲೂಕಿನ ಮಲ್ಲಾಬಾದ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸೋಮವಾರ ತೊಗರಿ ಖರೀದಿ ಕೇಂದ್ರಕ್ಕೆ ಶಾಸಕ ಎಂ.ವೈ.ಪಾಟೀಲ್ ಚಾಲನೆ ನೀಡಿದರು 
ಅಫಜಲಪುರ ತಾಲ್ಲೂಕಿನ ಮಲ್ಲಾಬಾದ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸೋಮವಾರ ತೊಗರಿ ಖರೀದಿ ಕೇಂದ್ರಕ್ಕೆ ಶಾಸಕ ಎಂ.ವೈ.ಪಾಟೀಲ್ ಚಾಲನೆ ನೀಡಿದರು     

ಅಫಜಲಪುರ: ಪ್ರತಿ ಕ್ವಿಂಟಲ್ ತೊಗರಿಗೆ ₹8 ಸಾವಿರ ಬೆಂಬಲ ಬೆಲೆಯಲ್ಲಿ ರೈತರು ಬೆಳೆದಿರುವ ತೊಗರಿಯನ್ನು ಸರ್ಕಾರ ಖರೀದಿ ಕೇಂದ್ರಗಳ ಮೂಲಕ ಕೊಂಡುಕೊಳ್ಳುತ್ತಿದೆ. ತೊಗರಿ ಬೆಳೆಗಾರರು ಇದರ ಲಾಭ ಪಡೆದುಕೊಳ್ಳಬೇಕು’ ಎಂದು ಶಾಸಕ ಎಂ.ವೈ.ಪಾಟೀಲ್ ತಿಳಿಸಿದರು.

ತಾಲ್ಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸೋಮವಾರ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಗೆ ಯಾವುದೇ ಮೋಸವಾಗುವುದಿಲ್ಲ. ನೇರವಾಗಿ ಎಷ್ಟು ಕ್ವಿಂಟಲ್ ಮಾರಾಟವಾಗಿದೆ ಅದಕ್ಕೆ ತಕ್ಕಂತೆ ಬಿಲ್‌ನ್ನು ನಿಮ್ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಸಹಕಾರಿ ಸಂಘದ ಸದಸ್ಯರು, ಕಾರ್ಯದರ್ಶಿಗಳು ಎಲ್ಲ ರೈತರಿಗೂ ಸಹಕಾರ ನೀಡಬೇಕು. ಸದ್ಯಕ್ಕೆ ಮಲ್ಲಾಬಾದ್ ಸೇರಿದಂತೆ ಗೊಬ್ಬೂರ ಬಿ, ಕರಜಿಗಿ, ಮಾಶಾಳ ಗ್ರಾಮಗಳಲ್ಲಿ ತೊಗರಿ ಖರೀದಿ ಕೇಂದ್ರ ಆರಂಭವಾಗಿವೆ’ ಎಂದು ಅವರು ತಿಳಿಸಿದರು.

ಸಂಘದ ಕಾರ್ಯದರ್ಶಿ ಬಸವರಾಜ್ ನರೋಣಿ ಮಾತನಾಡಿ, ‘ರೈತರು ಖರೀದಿ ಕೇಂದ್ರಕ್ಕೆ ಬರುವಾಗ ಆಧಾರ್ ಕಾರ್ಡ್, ಸಾಧ್ಯವಾದರೆ ಪಹಣಿ ತರಬೇಕು. ಒಂದು ಎಕರೆಗೆ 4 ಕ್ವಿಂಟಲ್ ತೊಗರಿ ಖರೀದಿ ಮಾಡಲಾಗುತ್ತದೆ’ ಎಂದು ಅವರು ತಿಳಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ರಾಜಕುಮಾರ್ ಬಡದಾಳ ಹಾಗೂ ಜಿ.ಪಂ. ಮಾಜಿ ಸದಸ್ಯ ಸಿದ್ಧಾರ್ಥ ಬಸರಿಗಡ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷರಾದ ಲಕ್ಷ್ಮಿ ಸುರೇಶ್ ಜಮಾದಾರ್, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ದುಂಡಮ್ಮ ಸಾಹೇಬಣ್ಣ ಜಮಾದಾರ್, ಸಹಕಾರಿ ಸಂಘದ ಉಪಾಧ್ಯಕ್ಷ ಭೀಮಣ್ಣ ಕೊಳ್ಳಿ, ಗ್ರಾ.ಪಂ.ಉಪಾಧ್ಯಕ್ಷ ಭಾಗಪ್ಪ ಕೊಳ್ಳಿ, ಮುಖಂಡರಾದ ಗುರುಶಾಂತಪ್ಪ ಪಾಟೀಲ್, ಸಾಯಿಬಣ್ಣ ಪೂಜಾರಿ, ಮಹಾಂತಪ್ಪ ಬಬಲೇಶ್ವರ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪ್ರಕಾಶ್ ಜಮಾದಾರ, ರಾಜುಗೌಡ ಪಾಟೀಲ್ ಅವರಳ್ಳಿ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಅಪ್ಪಾಸಾಹೇಬ್ ಪಾಟೀಲ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.