
ಕಲಬುರಗಿ: ‘ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ವತಿಯಿಂದ ಇಲ್ಲಿನ ಜಯನಗರದಲ್ಲಿ ಜ.25ರಂದು ಶೋಭಾಯಾತ್ರೆ, ಹಿಂದೂ ಸಮ್ಮೇಳನ ಆಯೋಜಿಸಲಾಗಿದೆ’ ಎಂದು ಸಮಿತಿ ಅಧ್ಯಕ್ಷ ಲಿಂಗರಾಜ ಸಿರಗಾಪೂರ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 11 ಗಂಟೆಗೆ ವೀರೇಂದ್ರ ಪಾಟೀಲ ಬಡಾವಣೆಯ ಹನುಮಂತ ದೇವರ ಗುಡಿಯಿಂದ ಭವ್ಯ ಶೋಭಾಯಾತ್ರೆ ಪ್ರಾರಂಭವಾಗಲಿದೆ. ಸಾಂಸ್ಕೃತಿಕ ಕಲಾ ತಂಡಗಳು, ಡೊಳ್ಳು ಕುಣಿತ ಹಾಗೂ ವಾದ್ಯಗಳೊಂದಿಗೆ ಎತ್ತಿನ ಬಂಡಿಯಲ್ಲಿ ಭಾರತ ಮಾತೆಯ ಭಾವಚಿತ್ರ ಮತ್ತು ಮಹಾಪುರುಷರ ಭಾವಚಿತ್ರಗಳ ಕಟೌಟ್‌ಗಳನ್ನು ಪ್ರದರ್ಶಿಸಲಾಗುವುದು. ಜಯನಗರ ಶಿವಮಂದಿರ ಆವರಣದಲ್ಲಿ ಮೆರವಣಿಗೆ ಸಮಾಪ್ತಿಗೊಳ್ಳಲಿದೆ’ ಎಂದರು.
‘ಮಧ್ಯಾಹ್ನ 1 ಗಂಟೆಗೆ ನಡೆಯುವ ಸಮ್ಮೇಳನದಲ್ಲಿ ಪಾಳಾದ ಗುರುಮೂರ್ತಿ ಶಿವಾಚಾರ್ಯರು, ಶ್ರೀನಿವಾಸ ಸರಡಗಿಯ ಅಪ್ಪಾರಾವ ದೇವಿ ಮುತ್ತ್ಯಾ, ಹೊನ್ನಕಿರಣಗಿಯ ಕೆಂಚ ಬಸವೇಶ್ವರ ಶಿವಾಚಾರ್ಯರು, ಕುಸನೂರಿನ ಪೀರಪ್ಪ ಮುತ್ತ್ಯಾ, ಕುಸನೂರ ತಾಂಡಾದ ವಿಠ್ಠಲ ಲಕ್ಷ್ಮಣ ರಾಠೋಡ ಸಾನ್ನಿಧ್ಯ ವಹಿಸುವರು. ಸಮ್ಮೇಳನದಲ್ಲಿ 25ಕ್ಕೂ ಹೆಚ್ಚು ಬಡಾವಣೆಗಳ ಸುಮಾರು 4 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮದ ನಂತರ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ’ ಎಂದು ತಿಳಿಸಿದರು.
‘ಹಿಂದೂ ಸಮ್ಮೇಳನ ಸಮಾಜದ ಏಕತೆ, ಸಂಸ್ಕೃತಿ ಉಳಿವು ಮತ್ತು ಧಾರ್ಮಿಕ ಜಾಗೃತಿ ಮೂಡಿಸುತ್ತದೆ. ಸಮಾಜದಲ್ಲಿ ಧರ್ಮ ಭಾವನೆ, ಶಾಂತಿ ಮತ್ತು ಸಹಕಾರವನ್ನು ಬೆಳೆಸುತ್ತದೆ’ ಎಂದು ಹೇಳಿದರು.
ಸಮಿತಿ ಉಪಾಧ್ಯಕ್ಷ ಸೂರ್ಯಕಾಂತ ಕೆ.ಬಿ., ನೇಮಿನಾಥ ಜೈನ್, ಬಸವರಾಜ ನಾಯ್ಕರ್, ಹರೀಶ ದೊಡ್ಡಮನಿ, ಕಾಶಿನಾಥ ರಾಯಗೊಂಡ, ಮನೋಹರ ಬಡಶೇಷಿ, ಜೆ.ನಾಗರಾಜ, ರಾಜಕುಮಾರ ಮಾಗ, ಶರಣು ಸೀಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.