ಕಲಬುರಗಿ: ರಾಜ್ಯದಲ್ಲಿ ಉತ್ಪನ್ನವಾಗುತ್ತಿರುವ ತೊಗರಿಯನ್ನು ನಿರ್ಲಕ್ಷಿಸಿ ವಿದೇಶದಿಂದ ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ಒಪ್ಪಂದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ದೇಶದಲ್ಲಿಯೇ ಅತಿಹೆಚ್ಚು ತೊಗರಿ ಉತ್ಪಾದಿಸುವುದು ಕರ್ನಾಟಕ. ರಾಜ್ಯದ ಉತ್ಪಾದನೆಯಲ್ಲಿ ಶೇ 40ರಷ್ಟು ತೊಗರಿ ಕಲಬುರಗಿ ಜಿಲ್ಲೆ ಒಂದರಲ್ಲೇ ಬೆಳೆಯುತ್ತಿದೆ. ಜೊತೆಗೆ ಕಲಬುರಗಿ ತೊಗರಿಗೆ ಜಿಐ ಮಾನ್ಯತೆಯೂ ಸಿಕ್ಕಿದೆ’ ಎಂದು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
‘ಕಳೆದ ಎರಡು ವರ್ಷಗಳಿಂದ ತೊಗರಿ ದರ ಕುಸಿಯಲು ಕೇಂದ್ರ ಸರ್ಕಾರದ ತೊಗರಿ ಆಮದು ನಿರ್ಧಾರ ಕಾರಣವಾಗಿದೆ. ತೊಗರಿ ಆಮದು ಸುಂಕ ಮುಕ್ತ ವಿನಾಯಿತಿಯನ್ನು 2026ರವರೆಗೆ ವಿಸ್ತರಿಸಲಾಗಿದೆ. 2024–25ನೇ ಸಾಲಿನಲ್ಲಿ 13 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ವಿದೇಶಿ ತೊಗರಿ ಆಮದು ಮಾಡಿಕೊಳ್ಳಲಾಯಿತು. ಈಗ ಮೊಜಾಂಬಿಕ್ ದೇಶದಿಂದ ಇನ್ನೂ 2 ಲಕ್ಷ ಮೆಟ್ರಿಕ್ ಟನ್ ತೊಗರಿ ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದ್ದು ಆಘಾತಕಾರಿಯಾಗಿದೆ’ ಎಂದಿದ್ದಾರೆ.
‘ಕರ್ನಾಟಕ ರಾಜ್ಯ ಉತ್ಪಾದನಾ ವೆಚ್ಚ ₹ 11,032 ಸೇರಿದಂತೆ ₹ 16,548 ಕನಿಷ್ಠ ಬೆಂಬಲ ಬೆಲೆಯ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿತ್ತು. ಆದರೆ, ಕೇಂದ್ರ ಸರ್ಕಾರವು ₹ 8 ಸಾವಿರಕ್ಕೆ ನಿಗದಿಪಡಿಸಿರುವ ಕುರಿತು ಕೇಂದ್ರದ ಕೃಷಿ ವೆಚ್ಚಗಳು ಹಾಗೂ ಬೆಲೆಗಳ ಆಯೋಗ ತನ್ನ ವರದಿಯಲ್ಲಿ ಒಪ್ಪಿಕೊಂಡಿದೆ’ ಎಂದು ಹೇಳಿದ್ದಾರೆ.
‘ಕರ್ನಾಟಕದ ಬಿಜೆಪಿಯ ಕೇಂದ್ರ ಸಚಿವರು ತಾವು ಪ್ರತಿನಿಧಿಸುವ ರಾಜ್ಯದ ಹಿತಾಸಕ್ತಿಗಳ ಪರವಾಗಿ ನಿಲ್ಲುವ ಬದಲು ದ್ವೇಷವನ್ನು ಹರಡುವುದರ ಮೇಲೆ ಹೆಚ್ಚು ಗಮನಹರಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.