ಕಲಬುರ್ಗಿ: ಶವ ಸಂಸ್ಕಾರಕ್ಕೆ ಜನರನ್ನು ಹತ್ತಿಸಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ ಚಿಂಚೋಳಿ ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ.ಈ ವೇಳೆ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ. ತೀವ್ರ ಬಿಸಿಲಿನ ಕಾರಣ ಟ್ರ್ಯಾಕ್ಟರ್‌ನ ಟೈರ್ ಸಿಡಿದಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಮಳಖೇಡದ ಯಲ್ಲಮ್ಮ ಭೀಮರಾವ್ (40) ಮೃತಪಟ್ಟವರು. ಇದೇ ಗ್ರಾಮದ ಇನ್ನೂ 15 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಚಿಂಚೋಳಿ ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದಲ್ಲಿ ಪರಿಚಯಸ್ಥರೊಬ್ಬರು ಶನಿವಾರ ಮೃತಪಟ್ಟಿದ್ದರು. ಅವರ ಶವ ಸಂಸ್ಕಾರಕ್ಕೆ ಸೇಡಂ ತಾಲ್ಲೂಕಿನ ಮಳಖೇಡದಿಂದ 23 ಮಂದಿ ಹೊರಟಿದ್ದರು. ಟ್ರ್ಯಾಕ್ಟರ್‌ನ ಟ್ರಾಲಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾಗ, ಮಧ್ಯಾಹ್ನ 12ರ ಸುಮಾರಿಗೆ ಬಿಸಿಲಿನ ಝಳಕ್ಕೆ ರಸ್ತೆ ಕಾದು ಟೈರ್ ಸಿಡಿದಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ರಸ್ತೆ ಬದಿಗೆ ಉರುಳಿತು ಎಂದು ಅದರಲ್ಲಿ ಪ್ರಯಾಣಿಸುತ್ತಿದ್ದವರೇ ಮಾಹಿತಿ ನೀಡಿದ್ದಾರೆ.
ಗಾಯಗೊಂಡವರನ್ನು ಚಿಂಚೋಳಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿರಿಯಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.