
ಕಮಲಾಪುರ (ಕಲಬುರಗಿ): ಟ್ರ್ಯಾಕ್ಟರ್ ಚಲಿಸುತ್ತಲೇ ರೀಲ್ಸ್ ಮಾಡುತ್ತಿದ್ದ ಚಾಲಕ ಅದೇ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮಹಾಗಾಂವದಲ್ಲಿ ಬುಧವಾರ ನಡೆದಿದೆ.
ಮಹಾಗಾಂವ ನಿವಾಸಿ ಲೋಕೇಶ ಕಲ್ಲಪ್ಪ ಪೂಜಾರಿ (22) ಮೃತ ಚಾಲಕ. ಟ್ರ್ಯಾಕ್ಟರ್ ಚಾಲಕನಾಗಿದ್ದ ಅವರು ಟ್ರ್ಯಾಕ್ಟರ್ ಚಲಿಸುವಾಗಲೇ ಒಂದು ಕೈಯಲ್ಲಿ ಮೊಬೈಲ್ ಫೋನ್ ಹಿಡಿದು ರೀಲ್ಸ್ ಮಾಡುತ್ತಾ ಇನ್ನೊಂದು ಕೈಯಲ್ಲಿ ಸ್ಟೇರಿಂಗ್ ಹಿಡಿದುಕೊಂಡಿರುತ್ತಿದ್ದ.
ಮಹಾಗಾಂವ ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಬುಧವಾರ ಟ್ರ್ಯಾಕ್ಟರ್‌ನಿಂದ ನೇಗಿಲು ಹೊಡೆಯುತ್ತಿರುವ ಸಮಯದಲ್ಲಿ ಇದೇ ರೀತಿ ರೀಲ್ಸ್ ಮಾಡುವಾಗ ಆಯತಪ್ಪಿ ಕಾಲು ಜಾರಿ ಟ್ರ್ಯಾಕ್ಟರ್ ಗಾಲಿ ಕೆಳಗೆ ಬಿದ್ದಿದ್ದು, ದೇಹದ ಮೇಲೆ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಹೊಲದಲ್ಲಿ ಯಾರು ಇರಲಿಲ್ಲ. ಸುಮಾರು ಅರ್ಧ ತಾಸು ಲೋಕೇಶ್ ಅವರ ಮೇಲೆಯೆ ಗಾಲಿ ತಿರುಗಿದೆ. ದೇಹದ ಅರ್ಧ ಭಾಗ ನಜ್ಜುಗುಜ್ಜಾಗಿದೆ.
ಬಹಳ ಹೊತ್ತಿನಿಂದ ಒಂದೆ ಕಡೆ ನಿಂತು ತಿರುಗುತ್ತಿದ್ದ ಟ್ರ್ಯಾಕ್ಟರ್ ಗಮನಿಸಿದ ರೈತರೊಬ್ಬರು ಅದರ ಬಳಿಗೆ ಹೋಗಿ ನೋಡಿದಾಗ, ಲೋಕೇಶ ಟ್ರ್ಯಾಕ್ಟರ್ ಗಾಲಿ ಕೆಳಗೆ ಸಿಕ್ಕಿಕೊಂಡು ಮೃತಪಟ್ಟಿರುವುದು ಗೊತ್ತಾಗಿದೆ.
ತಕ್ಷಣ ಸುತ್ತಲಿನ ರೈತರು ಜಮಾಯಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಪಿಐ ಶಿವಶಂಕರ ಸಾಹು, ಪಿಎಸ್ಐ ಬಸವರಾಜ ಚಿತ್ತಕೋಟೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.