ADVERTISEMENT

ಕಲಬುರಗಿ: ಮರಳು ತುಂಬಿದ ಟ್ರ್ಯಾಕ್ಟರ್ ಹಾಯಿಸಿ ಕಾನ್‌ಸ್ಟೆಬಲ್ ಕೊಲೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2023, 12:57 IST
Last Updated 16 ಜೂನ್ 2023, 12:57 IST
ಮಯೂರ ಚವ್ಹಾಣ
ಮಯೂರ ಚವ್ಹಾಣ   

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಹುಲ್ಲೂರು ಗ್ರಾಮದ ಬಳಿ ಭೀಮಾ ನದಿಯ ಪಕ್ಕದಲ್ಲಿದ್ದ ಮರಳನ್ನು ಗುರುವಾರ ರಾತ್ರಿ ಅಕ್ರಮವಾಗಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅಡ್ಡಗಟ್ಟಲು ಮುಂದಾದ ನೆಲೋಗಿ ಠಾಣೆ ಕಾನ್‌ಸ್ಟೆಬಲ್ ಮಯೂರ ಭೀಮು ಚವ್ಹಾಣ (51) ಮೇಲೆ ಚಾಲಕ ಟ್ರ್ಯಾಕ್ಟರ್ ಹಾಯಿಸಿ ಕೊಲೆ ಮಾಡಿದ್ದಾನೆ.

ನಾರಾಯಣಪುರ ಗ್ರಾಮದ ಟ್ರ್ಯಾಕ್ಟರ್ ಚಾಲಕ, ಆರೋಪಿ ಸಿದ್ದಣ್ಣ ಕರ್ಜಗಿ ಎಂಬಾತನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

2019ರಲ್ಲಿ ಮರಳು ಎತ್ತಲು ಗುತ್ತಿಗೆ ಹಿಡಿದಿದ್ದ ಗುತ್ತಿಗೆದಾರರು ಸರ್ಕಾರ ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ಮರಳನ್ನು ಭೀಮಾ ನದಿಯಿಂದ ಸಂಗ್ರಹಿಸಿದ್ದರು. ಹೀಗಾಗಿ, ಜಿಲ್ಲಾಡಳಿತ ಗುತ್ತಿಗೆದಾರರಿಗೆ ₹ 80 ಲಕ್ಷ ದಂಡ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಗುತ್ತಿಗೆದಾರ ನ್ಯಾಯಾಲಯಕ್ಕೆ ಹೋಗಿದ್ದರು. ಜಿಲ್ಲಾಡಳಿತದ ತೀರ್ಮಾನವನ್ನು ನ್ಯಾಯಾಲಯ ಎತ್ತಿ ಹಿಡಿದಿತ್ತು. ಆದರೆ, ಗುತ್ತಿಗೆದಾರ ದಂಡದ ಮೊತ್ತವನ್ನು ಪಾವತಿಸಿರಲಿಲ್ಲ. ಹೀಗಾಗಿ, ಅದಾಗಲೇ ಸಂಗ್ರಹಿಸಿದ್ದ ಮರಳನ್ನು ಜಿಲ್ಲಾಡಳಿತ ಜಪ್ತಿ ಮಾಡಿ ಲೋಕೋಪಯೋಗಿ ಇಲಾಖೆಯ ವಶಕ್ಕೆ ನೀಡಿತ್ತು.

ADVERTISEMENT

ಆ ಮರಳನ್ನು ಸಿದ್ದಣ್ಣ ಕರ್ಜಗಿ ಅಕ್ರಮವಾಗಿ ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಹೋಗುತ್ತಿದ್ದ. ರಾತ್ರಿ ಗಸ್ತಿನಲ್ಲಿದ್ದ ಮಯೂರ ಚವ್ಹಾಣ ಅವರು ಸಿದ್ದಣ್ಣನ ಟ್ರ್ಯಾಕ್ಟರ್ ಅನ್ನು ಬೈಕ್‌ನಲ್ಲಿ ಹಿಂಬಾಲಿಸಿದರು. ಪೊಲೀಸರು ಬೆನ್ನಟ್ಟಿರುವುದನ್ನು ಅರಿತ ಸಿದ್ದಣ್ಣ ಟ್ರ್ಯಾಕ್ಟರ್ ವೇಗವನ್ನು ಹೆಚ್ಚಿಸಿ ಪರಾರಿಯಾಗಲು ಮುಂದಾದಾಗ ಅಡ್ಡಗಟ್ಟಲು ಯತ್ನಿಸಿದ ಮಯೂರ ಅವರ ಮೇಲೆಯೇ ಟ್ರ್ಯಾಕ್ಟರ್‌ ಹಾಯಿಸಿ ಕೊಲೆ ಮಾಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ‘‍ಪ್ರಜಾವಾಣಿ’ಗೆ ತಿಳಿಸಿದರು.

ಮಾಹಿತಿ ಪಡೆದ ಸಚಿವ ಪ್ರಿಯಾಂಕ್: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಘಟನೆಯ ಮಾಹಿತಿ ಪಡೆದಿದ್ದಾರೆ. ಕುಟುಂಬದವರಿಗೆ ಸಾಂತ್ವನ ಹೇಳಿರುವ ಸಚಿವರ, ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

‘ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದು, ತನಿಖೆಗೆ ಆದೇಶಿಸಿದ್ದೇನೆ’ ಎಂದು ಪ್ರಿಯಾಂಕ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.