ಪ್ರಜಾವಾಣಿ ವಾರ್ತೆ
ಕಲಬುರಗಿ: ‘ಆದಿವಾಸಿಗಳು (ಬುಡಕಟ್ಟು ಸಮುದಾಯಗಳು) ಹಿಂದುಳಿದವರಲ್ಲ. ಅವರು ಭೂಮಿಯ ಮೊದಲ ನಿವಾಸಿಗಳು, ಆದರೆ ಆಧುನಿಕ ಆರ್ಥಿಕ ಅಭಿವೃದ್ಧಿ ಮತ್ತು ನಗರ ವಿಸ್ತರಣೆಯು ಅವರನ್ನು ಸಮಾಜದ ಅಂಚಿಗೆ ತಳ್ಳಿದೆ’ ಎಂದು ಮುಂಬೈನ ಟಾಟಾ ಇನ್‍ಕ್ಯೂಬೇಶನ್ ಫೌಂಡೇಶನ್‍ನ ವ್ಯವಸ್ಥಾಪಕ ನಿರ್ದೇಶಕ ಪ್ರೊ. ಸತ್ಯಜಿತ್ ಮಜುಂದಾರ್ ಹೇಳಿದರು.
ನವದೆಹಲಿಯ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ ಸಹಯೋಗದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯವು ಕಡಗಂಚಿಯ ವಿ.ವಿ. ಆವರಣದಲ್ಲಿ ಮಂಗಳವಾರ ಆರಂಭವಾದ ಎರಡು ದಿನಗಳ ‘ಬುಡಕಟ್ಟು ಜನರ ಸಬಲೀಕರಣದ ಮೂಲಕ ವಿಕಸಿತ ಭಾರತ: ಸಾಂಪ್ರದಾಯಿಕ ಬುದ್ಧಿವಂತಿಕೆ, ಸಾಂಸ್ಕೃತಿಕ ಪರಂಪರೆ ಮತ್ತು ಉದ್ಯಮಶೀಲತಾ ಸಾಮರ್ಥ್ಯಗಳನ್ನು ಬಳಸಿಕೊಳ್ಳುವುದು’ ಕುರಿತಾದ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡಿದರು.
ನೀರು, ಭೂಮಿ ಮತ್ತು ಅರಣ್ಯ ಜೀವವೈವಿಧ್ಯ ಬುಡಕಟ್ಟು ಸಮುದಾಯಗಳ ಜೀವಾಳವಾಗಿವೆ. ಪ್ರಕೃತಿಯ ಜೊತೆಗೆ ಗಾಢವಾದ ಸಂಬಂಧ ಹೊಂದಿದ್ದಾರೆ. ಬುಡಕಟ್ಟು ಜನರ ಸಾಂಪ್ರದಾಯಿಕ ಬುದ್ಧಿವಂತಿಕೆ (ಸ್ಥಳೀಯ ಬುದ್ಧಿಮತ್ತೆ), ಸಾಂಸ್ಕೃತಿಕ ಪರಂಪರೆ (ಸುಸ್ಥಿರ ಅಭ್ಯಾಸಗಳು), ಮತ್ತು ಉದ್ಯಮಶೀಲತೆಯ ಸಾಮರ್ಥ್ಯಗಳು (ಸಾಮಾಜಿಕ ಕಲ್ಯಾಣಕ್ಕೆ ಸ್ವಾವಲಂಬನೆ) ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಅಮೂಲ್ಯವಾದ ಪಾಠಗಳನ್ನು ಕಲಿಸುತ್ತವೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ‘ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಧಿಸಲು ಬುಡಕಟ್ಟು ಜನರ ಅಭಿವೃದ್ಧಿಯು ನಿರ್ಣಾಯಕವಾಗಿದೆ. ನಾವು ಬುಡಕಟ್ಟು ಸಮುದಾಯಗಳ ಶ್ರೀಮಂತ ವೈಜ್ಞಾನಿಕ ಜ್ಞಾನವನ್ನು ಬಳಸಿಕೊಳ್ಳಬೇಕು. ವಿಶೇಷವಾಗಿ ಗಿಡಮೂಲಿಕೆ ಔಷಧಿ, ಕೃಷಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ಅವರ ಜ್ಞಾನವನ್ನು ಬಳಸಿಕೊಳ್ಳಬೇಕು’ ಎಂದರು.
ಸಮ್ಮೇಳನದ ಸಂಚಾಲಕ ಶಿವಕುಮಾರ ಎಂ. ಬೆಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪವಿತ್ರಾ ಆರ್.ಆಲೂರ್ ಸ್ವಾಗತಿಸಿದರು, ರೋಹಿಣಾಕ್ಷ ಶಿರ್ಲಾಲು ವಂದಿಸಿದರು. ಸ್ಮೃತಿ ಸಾಜಿ ಕಾರ್ಯಕ್ರಮ ನಿರೂಪಿಸಿದರು. ಜಯದೇವಿ ಜಂಗಮಶೆಟ್ಟಿ ಮತ್ತು ಸ್ವಪ್ನಿಲ್ ಚಾಪೇಕರ್ ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.