ADVERTISEMENT

ಕಲಬುರಗಿ: ಟ್ರಂಪ್, ಮೋದಿ ಪ್ರತಿಕೃತಿ ದಹನ 13ರಂದು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 4:26 IST
Last Updated 11 ಆಗಸ್ಟ್ 2025, 4:26 IST
ಭೀಮಾಶಂಕರ ಮಾಡಿಯಾಳ
ಭೀಮಾಶಂಕರ ಮಾಡಿಯಾಳ   

ಕಲಬುರಗಿ: ‘ಬಹುರಾಷ್ಟ್ರೀಯ ಕಂಪನಿಗಳೇ ದೇಶ ಬಿಟ್ಟು ತೊಲಗಿ’, ‘ಕಾರ್ಪೊರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ’ ಘೋಷಣೆಯಡಿ ನಗರದ ಎಸ್‌ವಿಪಿ ವೃತ್ತದಲ್ಲಿ ಆ.13ರಂದು ಬೆಳಿಗ್ಗೆ 11 ಗಂಟೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಗುವುದು’ ಎಂದು ಅಖಿಲ ಭಾರತ ಕಿಸಾನ್‌ ಸಭಾ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತ ಬಿಟ್ಟು ತೊಲಗಿ’ ಚಳವಳಿಯ 83ನೇ ವಾರ್ಷಿಕೋತ್ಸವದ ಅಂಗವಾಗಿ ಸಂಯುಕ್ತ ಕಿಸಾನ್‌ ಮೋರ್ಚಾ ಹಾಗೂ ಕೇಂದ್ರೀಯ ಕಾರ್ಮಿಕ ಸಂಘಗಳ ಜಂಟಿ ಕರೆಯ ಮೇರೆ 11 ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದರು.

‘ದೇಶದ ಕೃಷಿ ವಲಯವನ್ನು ಹಾಗೂ ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ವಿದೇಶಿ ಬಹುರಾಷ್ಟ್ರೀಯ ಕಂಪನಿಗಳಿಗೆ ಸುಂಕ ರಹಿತವಾಗಿ ತೆರೆಯಲಾಗುತ್ತಿದೆ. ದೇಶದ ಹಿತಕ್ಕೆ ವಿರುದ್ಧವಾಗಿರುವ ಬ್ರಿಟನ್ ಜೊತೆಗಿನ ಒಪ್ಪಂದವನ್ನು ಅಮಾನುತು ಮಾಡಬೇಕು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಸುಂಕ ಹೇರಿಕೆ ಹಾಗೂ ದಂಡದ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಿ ಸಾರ್ವಭೌಮತ್ವವನ್ನು ಕಾಪಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಮಹೇಶ್‌ ಎಸ್‌.ಬಿ. ಮಾತನಾಡಿ, ‘ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ನೀತಿ ಚೌಕಟ್ಟು (ಎನ್‌ಪಿಎಫ್‌ಎಎಂ), ಹೊಸ ರಾಷ್ಟ್ರೀಯ ಸಹಕಾರ ನೀತಿ (ಎನ್‌ಸಿಪಿ) ರದ್ದುಪಡಿಸಬೇಕು. ರೈತರ ಎಲ್ಲ ಬೆಳಿಗಳಿಗೂ ಸಮಗ್ರ ಉತ್ಪಾದನಾ ವೆಚ್ಚಕ್ಕೆ ಶೇ 50ರಷ್ಟು ಸೇರಿಸಿ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವುದನ್ನು ಸರ್ಕಾರ ಖಾತ್ರಿಪಡಿಸಬೇಕು. ಸಮಗ್ರ ಸಾಲಮನ್ನಾ ನೀತಿ ಜಾರಿ ಮಾಡಬೇಕು. ಮೈಕ್ರೊ ಫೈನಾನ್ಸ್‌ ಕಂಪನಿಗಳ ಕಿರುಕುಳ ತಡೆಗಟ್ಟಬೇಕು. ವಿದ್ಯುತ್‌ ಕ್ಷೇತ್ರದ ಖಾಸಗೀಕರಣ ಮಾಡಬಾರದು’ ಎಂದು ಆಗ್ರಹಿಸಿದರು.

ದಿಲೀಪ್‌ ನಾಗೂರೆ, ಸಾಜಿದ್‌, ರಾಯಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.