ADVERTISEMENT

ಕ್ಷಯ; ಕಫ ಪರೀಕ್ಷೆಗೆ ಸೂಚನೆ

ಜ. 2ರಿಂದ ಜಿಲ್ಲೆಯಾದ್ಯಂತ ಕ್ಷಯ ರೋಗ ಪತ್ತೆ ಆಂದೋಲನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 14:35 IST
Last Updated 31 ಡಿಸೆಂಬರ್ 2018, 14:35 IST
ಕ್ಷಯರೋಗ ಜಾಗೃತಿ ಕುರಿತ ಪೋಸ್ಟರ್‌ಗಳನ್ನು ಸೋಮವಾರ ಬಿಡುಗಡೆ ಮಾಡಲಾಯಿತು
ಕ್ಷಯರೋಗ ಜಾಗೃತಿ ಕುರಿತ ಪೋಸ್ಟರ್‌ಗಳನ್ನು ಸೋಮವಾರ ಬಿಡುಗಡೆ ಮಾಡಲಾಯಿತು   

ಕಲಬುರ್ಗಿ: ‘ಕ್ಷಯ ರೋಗ ಪತ್ತೆ ಆಂದೋಲನದಲ್ಲಿ ಸಂಶಯಾಸ್ಪದ ಕ್ಷಯ ರೋಗಿಗಳ ಕಫವನ್ನು ಪರಿಣಾಮಕಾರಿಯಾಗಿ ಪರೀಕ್ಷಿಸಬೇಕು’ ಎಂದು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಕ್ರಿಯ ಕ್ಷಯ ರೋಗ ಪ್ರಕರಣಗಳ ಪತ್ತೆ ಮಾಸಾಚರಣೆ ಕುರಿತು ಸೋಮವಾರ ಆಯೋಜಿಸಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಕ್ಷಯ ರೋಗ ಪ್ರಕರಣಗಳು ಹೆಚ್ಚಿಗೆ ಇರುವ ಸಾಧ್ಯತೆಗಳಿವೆ. ಆದರೆ, ಪರಿಣಾಮಕಾರಿಯಾಗಿ ಪತ್ತೆಯಾಗದಿರುವುದು ಬೇಸರದ ಸಂಗತಿಯಾಗಿದೆ’ ಎಂದರು.

ADVERTISEMENT

‘ಕ್ಷಯ ರೋಗ ಹೆಚ್ಚಿಗೆ ಕಾಣಿಸಿಕೊಳ್ಳುವ ಹಾಗೂ ಕ್ಷಯ ರೋಗಿಗಳಿರುವ ಸಮುದಾಯ, ಪ್ರದೇಶ ಹಾಗೂ ಗ್ರಾಮಗಳ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕು. ರೋಗ ಪತ್ತೆ ಹಾಗೂ ಚಿಕಿತ್ಸೆಗಾಗಿ ವಿವರಣಾತ್ಮಕ ಯೋಜನೆ ರೂಪಿಸಿ, ಸಂಶಯಾಸ್ಪದ ರೋಗಿಗಳಿಂದ ನಿಗದಿತ ಸಮಯದಲ್ಲಿ ಕಫ ಪಡೆಯಬೇಕು’ ಎಂದು ಹೇಳಿದರು.

‘ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಗೂ ಜಿಲ್ಲೆಯಿಂದ ಬೇರೆಡೆ ವಲಸೆ ಹೋಗಿರುವ ರೋಗಿಗಳ ಬಗ್ಗೆ ನಿಖರವಾಗಿ ತಿಳಿದುಕೊಳ್ಳಬೇಕು. ಅವರು ಸಮರ್ಪಕವಾಗಿ ಚಿಕಿತ್ಸೆ ಪಡೆಯುವಂತೆ ನೋಡಿಕೊಳ್ಳಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕ್ಷಯ ರೋಗದ ಜತೆಗೆ ಏಡ್ಸ್, ಕುಷ್ಠ ರೋಗ, ಅಂಧತ್ವ ನಿವಾರಣೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಬೇಕು. ರೋಗಿಗಳ ಅಂಕಿ-ಅಂಶಗಳನ್ನು ಸಂಗ್ರಹಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ. ಮಾತನಾಡಿ, ‘ಸರಿ ಸುಮಾರು 1 ಲಕ್ಷ ಜನರಲ್ಲಿ 128 ಕ್ಷಯರೋಗ ಪ್ರಕರಣಗಳು ಪತ್ತೆಯಾಗುತ್ತವೆ. ಈ ಸಂಖ್ಯೆಯ ಸರಾಸರಿ ಪ್ರಮಾಣಕ್ಕಿಂತ ಹೆಚ್ಚು ಅಥವಾ ಕಡಿಮೆ ಇದ್ದರೆ ಅದಕ್ಕೆ ಕಾರಣ ಕಂಡುಕೊಳ್ಳಬೇಕು. ಕ್ಷಯ ರೋಗ ಹೆಚ್ಚು ಪತ್ತೆಯಾಗುವ ಪ್ರದೇಶಗಳಲ್ಲಿ ಹೆಚ್ಚಿನ ಕಾಳಜಿ ವಹಿಸಿ ಕಫ ಪರೀಕ್ಷೆ ಮಾಡಬೇಕು. ಒಂದು ಗ್ರಾಮ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಘಟಕಗಳನ್ನಾಗಿಸಿ ಗುರಿ ಸಾಧಿಸಬೇಕು’ ಎಂದರು.

ಜಿಲ್ಲಾ ಕ್ಷಯ ರೋಗ ಅಧಿಕಾರಿ ಡಾ. ರಾಜೇಂದ್ರ ಭಾಲ್ಕೆ ಮಾತನಾಡಿ, ‘ಜಿಲ್ಲೆಯಾದ್ಯಂತ ಜ.2 ರಿಂದ 12ರ ವರೆಗೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಕಳೆದ ಬಾರಿ 207 ಖಚಿತ ಪ್ರಕರಣಗಳು ಪತ್ತೆಯಾಗಿದ್ದವು. ಜಿಲ್ಲೆಯಲ್ಲಿ ಸದ್ಯ 1,397 ರೋಗಿಗಳು ಡಾಟ್ಸ್ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಕೆ.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.