ADVERTISEMENT

ಚಿನ್ನದ ವ್ಯಾಪಾರಿ ಕೊಲೆ: ಇಬ್ಬರ ಬಂಧನ

ಸಾಲ ಮರಳಿ ಕೊಡಲಾಗದೇ ಸಾಲಗಾರನನ್ನೇ ಕೊಲೆ ಮಾಡಿದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 16:08 IST
Last Updated 14 ಜನವರಿ 2022, 16:08 IST

ಕಲಬುರಗಿ: ಇಲ್ಲಿನ ಚಿನ್ನದ ವ್ಯಾಪಾರಿ ಮಂಜುನಾಥ ತೇಗನೂರ ಅವರ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಶುಕ್ರವಾರ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ತಾಪುರದ ನಿವಾಸಿ ರಹಮಾನ್‌ ಶೇಖ್ ಹಾಗೂ ಕಲಬುರಗಿಯ ಖಾಜಾ ಕೋಟನೂರ್ ನಿವಾಸಿ ಮಹಮ್ಮದ್ ಲಾಲ್‌ಸಾಬ್ ಬಂಧಿತರು. ಈ ಮೂವರ ಮಧ್ಯೆ ಇದ್ದ ಲೇವಾದೇವಿ ವ್ಯವಹಾರವೇ ಕೊಲೆಗೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ವಿವರ:ಲೇವಾದೇವಿ ವ್ಯಾವಹಾರ ಮಾಡುತ್ತಿದ್ದ ಮಂಜುನಾಥ ಅವರಿಂದಮಹಮ್ಮದ್ ಲಾಲ್‌ಸಾಬ್ ₹ 12 ಲಕ್ಷ ಸಾಲ ಪಡೆದಿದ್ದ. ಈ ಸಾಲ ತೀರಿಸಲು ಆಗದಿದ್ದರೆಜಮೀನು ನೀಡುವುದಾಗಿ ಅಗ್ರಿಮೆಂಟ್‌ ಮಾಡಿಕೊಂಡಿದ್ದ.ಅಗ್ರಿಮೆಂಟ್ ಅವಧಿ ಮುಗಿದು ಎರಡು ವರ್ಷ ಕಳೆದರೂ ಸಾಲ ಹಿಂದುರುಗಿಸಲಿಲ್ಲ. ಇದರಿಂದ ಮಂಜುನಾಥ ಅವರು ತನ್ನ ಸಾಲ ನೀಡಬೇಕು ಇಲ್ಲ ಜಮೀನು ಕೊಡಬೇಕು ಎಂದು ಪದೇಪದೇ ಕೇಳುತ್ತಿದ್ದರು. ಅದರೆ, ಜಮೀನು ನೀಡಲು ಮಹಮ್ಮದ್ ಲಾಲ್‌ಸಾಬ್ ಅಡ್ಡಗಾಲು ಹಾಕಿದ್ದರು. ಇನ್ನೊಂದಡೆ, ಖಾಜಾ ಕೋಟನೂರ್‌ನ ರಹಮಾನ್ ಶೇಖ್‌ ಕೂಡ ಮಂಜುನಾಥ ಅವರಿಗೆ ₹ 1 ಲಕ್ಷ ಸಾಲ ನೀಡಬೇಕಿತ್ತು. ಸಾಲ ಮರಳಿಸಲು ಆಗುವುದಿಲ್ಲ ಎಂದು ತೀರ್ಮಾಣಿಸಿದ ಇಬ್ಬರೂ ಮಂಜುನಾಥ ಅವರನ್ನು ಕೊಲೆ ಮಾಡಲು ಹೊಂಚು ರೂಪಿಸಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

‘ಜನವರಿ 10ರಂದು ಸಾಲದ ಹಣ ಕೊಡುವುದಾಗಿ ನಂಬಿಸಿ ಆರೋಪಿಗಳು ಮಂಜುನಾಥ ಅವರನ್ನು ರೇವೂರ ಬಳಿಯ ಜಮೀನೊಂದರಲ್ಲಿ ಕರೆದಿದ್ದರು. ಅವರ ಕಣ್ಣಿನಲ್ಲಿ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದರು. ಸಾಕ್ಷ್ಯ ನಾಶಕ್ಕಾಗಿ ಕಾಗಿನಾ ನದಿಯಲ್ಲಿ ಮಾರಕಾಸ್ತ್ರಗಳನ್ನು ಎಸೆದಿದ್ದರು. ಅಲ್ಲದೇ, ಮಂಜುನಾಥ ಅವರು ಸತ್ತ ಬಳಿಕವೂ ತಲೆ ಮೇಲೆ ಕಲ್ಲು ಎತ್ತಿಹಾಕಿ ಗುರುತು ಸಿಗದಂತೆ ಮಾಡಿದ್ದರು’ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌ ಅವರ ಆದೇಶದ ಮೇರೆಗೆ ಆರೋಪಿಗಳ ಪತ್ತೆಗೆ ಎರಡು ತಂಡ ರಚಿಸಲಾಗಿತ್ತು. ವಾರದೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.