ADVERTISEMENT

ಲಂಚ: ಇಬ್ಬರು ಕಾನ್‌ಸ್ಟೆಬಲ್‌ಗಳು ಅಮಾನತು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 16:08 IST
Last Updated 23 ಸೆಪ್ಟೆಂಬರ್ 2022, 16:08 IST
ಶಿವರಾಯ
ಶಿವರಾಯ   

ಕಲಬುರಗಿ: ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾದ ಜಿಲ್ಲೆಯ ಜೇವರ್ಗಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಶಿವರಾಯ ಅರಳಗುಂಡಗಿ ಹಾಗೂ ಅವ್ವಣ್ಣ ಎಂಬುವವರನ್ನು ಅಮಾನತುಗೊಳಿಸಿ ಎಸ್ಪಿ ಇಶಾ ಪಂತ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಮರಳು ವಿಲೇವಾರಿ ಸಂಬಂಧ ಅಖಿಲ್‌ ಎಂಬುವವರು ನೀಡಿದ ದೂರು ಆಧರಿಸಿದ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿ ಬಂಧಿಸಿದ್ದರು. ಬಂಧನದ ಮಾಹಿತಿ ತಿಳಿಯುತ್ತಿದ್ದಂತೆ ತಪ್ಪಿಸಿಕೊಂಡು ಹೋಗಲು ಯತ್ನಿಸುತ್ತಿದ್ದ ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ಕಲಬುರಗಿ ಹೊರವಲಯದ ನಂದಿಕೂರ ಗ್ರಾಮದ ಬಳಿಕ ಬೆನ್ನಟ್ಟಿ ಹಿಡಿದಿದ್ದರು.

‘ಶಿವರಾಯ ಹಾಗೂ ಅವ್ವಣ್ಣ ಬಂಧನವಾಗುತ್ತಿದ್ದಂತೆಯೇ ಸೇವೆಯಿಂದ ಅಮಾನತುಗೊಳಿಸಲಾಗಿದೆ’ ಎಂದು ಎಸ್ಪಿ ಇಶಾ ಪಂತ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರನ್ನು ಅಕ್ಟೋಬರ್ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಜೇವರ್ಗಿ ಸಿಪಿಐ ಶಿವಪ್ರಸಾದ ಮಠದ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಅವರನ್ನು ಬಂಧಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಘಟನೆ ವಿವರ: ಮರಳು ವಿಲೇವಾರಿಗೆ ಸಂಬಂಧಿಸಿದಂತೆ ಕಾನ್‌ಸ್ಟೆಬಲ್ ಶಿವರಾಯ ಅಖಿಲ್ ಎಂಬುವವರಿಂದ ₹ 10 ಸಾವಿರ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದರು. ನಂತರ ಶಿವರಾಯನಿಂದ ಸಿಪಿಐ ಶಿವಪ್ರಸಾದ ಮಠದ ಅವರಿಗೆ ಫೋನ್ ಕರೆ ಮೂಲಕ ಮಾತನಾಡಿಸಿದ್ದು, ಹಣ ಪಡೆಯಲು ಬರುವಂತೆ ಸೂಚಿಸಲಾಗಿದೆ. ಕಲಬುರಗಿಯಿಂದ ಜೇವರ್ಗಿಗೆ ಸಿಪಿಐ ವಾಹನ ಚಾಲಕ ಅವ್ವಣ್ಣ ತೆರಳುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿದರು.

ಲೋಕಾಯುಕ್ತ ಮರುಸ್ಥಾಪನೆಯಾದ ಬಳಿಕ ಜಿಲ್ಲೆಯಲ್ಲಿ ನಡೆದ ಮೊಟ್ಟ ಮೊದಲ ದಾಳಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.