ADVERTISEMENT

ಕಲಬುರ್ಗಿ: ಕೋವಿಡ್‌ಗೆ ಮತ್ತಿಬ್ಬರ ಸಾವು

33 ಮಂದಿಗೆ ಪಾಸಿಟಿವ್‌; 50 ವರ್ಷದೊಳಗಿನವರಲ್ಲೇ ಹೆಚ್ಚಿದ ಕೊರೊನಾ ವೈರಾಣು

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 16:53 IST
Last Updated 27 ಜೂನ್ 2020, 16:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ: ಕೋವಿಡ್‌–19 ಸೋಂಕಿನಿಂದಾಗಿ ನಗರದ ಇಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿದೆ. ಜತೆಗೆ, ಶನಿವಾರ ಮತ್ತೆ 33 ಮಂದಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ.

ಇಲ್ಲಿನ ಎಂಎಸ್‌ಕೆ ಮಿಲ್‌ನ ಮದೀನಾ ಕಾಲೊನಿ 50 ವರ್ಷದ ಪುರುಷ, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜಿಮ್ಸ್‌ನ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಶುಕ್ರವಾರ ಅವರು ಕೊನೆಯುಸಿರೆಳೆದರು. ಇನ್ನೊಂದೆಡೆ, ಗಾಜಿಪುರ ಬಡಾವಣೆಯ 72 ವರ್ಷದ ವೃದ್ಧ ಕೂಡ ಮೃತಪಟ್ಟಿದ್ದಾರೆ. ಸಾಮಾನ್ಯ ಜ್ವರ ಬಂದಿದ್ದ ಅವರನ್ನು ಜಿಮ್ಸ್‌ಗೆ ದಾಖಲಿಸಲಾಗಿತ್ತು. ಅವರ ಗಂಟಲು ಮಾದರಿ ತಪಾಸಣೆಗೆ ಒಳಪಡಿಸಿದಾಗ ಕೋವಿಡ್‌ ತಗುಲಿದ್ದು ಖಚಿತಪಟ್ಟಿತ್ತು. ಚಿಕಿತ್ಸೆಗೂ ಮುನ್ನವೇ ಅವರು ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.

50 ವರ್ಷದ ಒಳಗಿನವರೇ ಹೆಚ್ಚು: ಶನಿವಾರ ಪತ್ತೆಯಾದ ಒಟ್ಟು 33 ಸೋಂಕಿತರಲ್ಲಿ 29 ಮಂದಿ 50 ವರ್ಷದೊಳಗಿನವರೇ ಆಗಿದ್ದಾರೆ. ಇವರಲ್ಲಿ ಇಬ್ಬರು ಮಕ್ಕಳು ಸೇರಿದ್ದು, ಉಳಿದಂತೆ 50 ವರ್ಷ ಮೇಲ್ಪಟ್ಟ ನಾಲ್ವರು ಇದ್ದಾರೆ.

ADVERTISEMENT

ಎಲ್ಲರನ್ನೂ ನಗರದ ಕೋವಿಡ್‌ ಕೇರ್‌ ಸೆಂಟರ್‌ನ ಐಸೋಲೇಷನ್‌ ವಾರ್ಡ್‌ಗಳಿಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 1364ಕ್ಕೆ ಏರಿದೆ. ಇದರಲ್ಲಿ 388 ಮಂದಿಗೆ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಪರೀಕ್ಷೆಗೆ ನಕಾರ: ತಂಡ ಬರಿಗೈಲಿ ವಾಪಸ್‌

ಆಳಂದ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶನಿವಾರ, ಗಂಟಲು ದ್ರವ ಸಂಗ್ರಹಕ್ಕೆ ಬಂದ ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಶಂಕಿತ ವ್ಯಕ್ತಿಗಳು ಕಿರಿಕಿರಿ ಮಾಡಿದ್ದಾರೆ.

ತಾಲ್ಲೂಕಿನ ಕಣಮಸ ಗ್ರಾಮದಲ್ಲಿ ಜೂನ್‌ 24ರಂದು ಮೂವರಲ್ಲಿ ಕೋವಿಡ್‌ ಪತ್ತೆಯಾಗಿದೆ. ಮರುದಿನ ಈ ಮೂವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಕುಟುಂಬದ ಸದಸ್ಯರ ಗಂಟಲು ದ್ರವ ಪರೀಕ್ಷೆಗೆ ಆರೋಗ್ಯ ಇಲಾಖೆಯ ಸ್ವಾಬ್‌ ಟೆಸ್ಟಿಂಗ್ ಸಂಚಾರಿ ತಂಡ ಮನೆಗೆ ತೆರಳಿದೆ. ಆಗ ಕುಟುಂಬದ ಸದಸ್ಯರು ಗಂಟಲು ದ್ರವ ಪರೀಕ್ಷೆಗೆ ನಿರಾಕರಿಸಿದ್ದಲ್ಲದೆ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಜೊತೆ ಅನುಚಿತವಾಗಿ ವರ್ತಿಸಿದರು ಎಂದು ದೂರಲಾಗಿದೆ.‌

ಬೋಧನ ಗ್ರಾಮದಲ್ಲಿಯೂ ಇಬ್ಬರಿಗೆ ಕೋವಿಡ್‌ ಪತ್ತೆಯಾಗಿದೆ. ಇಲ್ಲಿಯ ನಾಲ್ಕು ವರ್ಷದ ಬಾಲಕಿ ಮನೆಗೆ ಗಂಟಲು ದ್ರವ ಪರೀಕ್ಷೆಗೆ ತೆರಳಿದ ಸಂಚಾರಿ ತಂಡದ ಮೇಲೆ ಕುಟುಂಬದವರು ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ತಂಡದವರು ಬರಿಗೈಲಿ ಮರಳಿದ್ದಾರೆ.

24 ಮಂದಿ ಗುಣಮುಖ‌

ಶನಿವಾರ ಮತ್ತೆ 24 ಮಂದಿ ಕೋವಿಡ್‌ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇವರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಗುಣಮುಖರಾದವರ ಸಂಖ್ಯೆ 959ಕ್ಕೆ ಏರಿದೆ. ಗುಣಮುಖರಾದ ಎಲ್ಲರೂ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.