ADVERTISEMENT

ಭಾಗೋಡಿ ಗ್ರಾ.ಪಂಗೆ ಇಬ್ಬರು ಪಿಡಿಒ!

ಅಧ್ಯಕ್ಷೆ, ಒಬ್ಬ ಪಿಡಿಒ ವಿರುದ್ಧ ಹಣ ದುರುಪಯೋಗದ ದೂರು

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 6:00 IST
Last Updated 8 ಜೂನ್ 2020, 6:00 IST

ಚಿತ್ತಾಪುರ: ತಾಲ್ಲೂಕಿನ ಭಾಗೋಡಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇಬ್ಬರು ಪಿಡಿಒ ಕರ್ತವ್ಯ ನಿರ್ವಹಿಸು ತ್ತಿರುವುದು ಬೆಳಕಿಗೆ ಬಂದಿದೆ.

ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರು ಪಂಚಾಯಿತಿ ಪಿಡಿಒ ಪ್ರಕಾಶ ಹಾಗೂ ಅಧ್ಯಕ್ಷೆ ವಿರುದ್ಧ ಹಣ ದುರುಪಯೋಗದ ದೂರು ನೀಡಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ತನಿಖಾಧಿಕಾರಿಯಾಗಿ ನಿಯೋಜನೆ ಗೊಂಡಿದ್ದ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶ್ರೀಧರ ಅವರು ಎರಡು ಸಲ ಪಂಚಾಯಿತಿಗೆ ಭೇಟಿ ನೀಡಿದ್ದರೂ ತನಿಖಾ ವರದಿ ಸಲ್ಲಿಸುವ ಮುಂಚೆ ಬೇರೆಡೆಗೆ ವರ್ಗಾವಣೆಯಾಗಿದ್ದರು. ನಂತರ ತನಿಖೆ ಶುರು ಮಾಡಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅನಿತಾ ಪೂಜಾರಿ (ಈಗ ಬೆಂಗಳೂರಿಗೆ ನಿಯೋಜನೆ) ಅವರು ಗ್ರಾಮಕ್ಕೆ ಭೇಟಿ ನೀಡಿ ಹಣಕಾಸಿನ ದಾಖಲೆಪತ್ರ ಮತ್ತು ಸ್ಥಳ ಪರಿಶೀಲನೆ ಮಾಡುವಾಗ ಅವ್ಯವಹಾರ ಕಂಡು ಬಂದಿದ್ದರಿಂದ ಪ್ರಕಾಶ ಅವರ ಜಾಗಕ್ಕೆ ಕರದಾಳ ಗ್ರಾಮ ಪಂಚಾಯಿತಿ ಪಿಡಿಒ ರಾಜಶೇಖರ ಬಾಳಿ ಅವರಿಗೆ ಭಾಗೋಡಿ ಪಂಚಾಯಿತಿ ಪಿಡಿಒ ಹುದ್ದೆಯ ಪ್ರಭಾರ ವಹಿಸಿ ಮೇ 29 ರಂದು ಆದೇಶ ಮಾಡಿದ್ದಾರೆ.

ಪ್ರಕಾಶ ಅವರು ಇದುವರೆಗೆ ರಾಜಶೇಖರ ಅವರಿಗೆ ಪಂಚಾಯಿತಿ ಪ್ರಭಾರ ವಹಿಸಿಕೊಟ್ಟಿಲ್ಲ. ಇಬ್ಬರೂ ಪಿಡಿಒ ಗ್ರಾಮ ಪಂಚಾಯಿತಿಗೆ ಬಂದು ಹೋಗುತ್ತಿದ್ದಾರೆ. ತಾಲ್ಲೂಕು ಮಟ್ಟದ ಸಭೆಗೆ ಇಬ್ಬರೂ ಹಾಜರಾಗುತ್ತಿದ್ದಾರೆ. ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರಿಗೆ ಅಧಿಕೃತ ಪಿಡಿಒ ಯಾರು ಎನ್ನುವ ಗೊಂದಲ ಉಂಟಾಗಿದೆ.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯರಲ್ಲಿ 2 ತಂಡವಾಗಿ ಒಂದು ತಂಡ ಪಿಡಿಒ ಮತ್ತು ಅಧ್ಯಕ್ಷರ ವಿರುದ್ಧ ಹಣ ದುರುಪಯೋಗದ ದೂರು ನೀಡಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಆಗ್ರಹಿಸಿದೆ. ಮತ್ತೊಂದು ತಂಡದ ಸದಸ್ಯರು ಪ್ರಕಾಶ ಅವರನ್ನು ಮುಂದುವರಿಸಬೇಕು ಎಂದು ರಾಜಕೀಯ ಪ್ರಭಾವ ಬಳಸುತ್ತಿದ್ದಾರೆ ಎನ್ನಲಾಗಿದೆ.

ಪಿಡಿಒ ಪ್ರಕಾಶ ಅವರನ್ನು ಭಾಗೋಡಿ ಗ್ರಾಮ ಪಂಚಾಯಿತಿ ಹುದ್ದೆಯಿಂದ ಬಿಡುಗಡೆಗೊಳಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷದ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಪ್ರತಿನಿಧಿಗಳಿಬ್ಬರು ಅಧಿಕಾರಿಗೆ ಸೂಚಿಸಿದ್ದಾರೆ. ಆದರೆ, ಅದೇ ಪಕ್ಷದ ಜಿಲ್ಲಾ ಮುಖಂಡರೊಬ್ಬರು ಪ್ರಕಾಶ ಅವರನ್ನೇ ಮುಂದುವರಿಸಬೇಕು ಎಂದು ಒತ್ತಡ ಹೇರುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಮ್ಮ ಸಂಕಟ ತೋಡಿಕೊಂಡರು.

ಅವ್ಯವಹಾರದ ಸಮಗ್ರ ತನಿಖೆ ಮುಗಿಸಿ ಕಾನೂನು ಕ್ರಮ ಕೈಗೊಳ್ಳುವವರೆಗೆ ಪಿಡಿಒ ಪ್ರಕಾಶ ಅವರನ್ನು ಮುಂದುವರಿಸದೆ ರಾಜಶೇಖರ ಬಾಳಿ ಅವರಿಗೆ ಅಧಿಕಾರಿಗಳು ಪ್ರಭಾರ ವಹಿಸಿಕೊಡಲು ಕ್ರಮ ತೆಗೆದುಕೊಳ್ಳಬೇಕು. ಅವ್ಯವಹಾರ ನಡೆಸಿದವರನ್ನು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿದು ಮುಂದುವರಿಸಿದರೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ಮುಖಂಡರಾದ ಗಣಪತಿ, ದೇವಿಂದ್ರ ಅರಣಕಲ್, ಪ್ರದೀಪ ಕದ್ದರಗಿ
ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.