ಅಫಜಲಪುರ: ಮಹಾರಾಷ್ಟ್ರದ ಉಜನಿ ಜಲಾಶಯ ಜಲಾನಯನ ಪ್ರದೇಶದಲ್ಲಿ ಬಿರುಸಿನ ಮಳೆಯಾಗುತ್ತಿದೆ. ಡ್ಯಾಂನಿಂದ ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿಸಲಾಗುತ್ತಿದ್ದು, ನದಿಯ ದಡದ ಗ್ರಾಮಸ್ಥರು ನೀರಿಗೆ ಇಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಭೀಮಾ ಏತ ನೀರಾವರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಂತೋಷ್ ಕುಮಾರ್ ಸಜ್ಜನ್ ತಿಳಿಸಿದರು.
‘ಉಜನಿ ಜಲಾಶಯದಿಂದ 60 ಸಾವಿರ ಕ್ಯೂಸೆಕ್ ನೀರು ಭೀಮಾನದಿಗೆ ಹರಿದು ಬರುತ್ತಿದೆ. ತಾಲ್ಲೂಕಿನಲ್ಲಿಯೂ ಭೀಮಾನದಿ ಸುತ್ತಮುತ್ತ ಮಳೆಯಾಗುತ್ತಿದ್ದು, ಒಟ್ಟು ಭೀಮಾನದಿಯಲ್ಲಿ ಗುರುವಾರ ಬೆಳಿಗೆ ವರೆಗೆ 80 ಸಾವಿರ ಕ್ಯೂಸೆಕ್‌ಗಳಷ್ಟು ನೀರು ಹರಿಯಲಿದೆ. ಅಷ್ಟೇ ಪ್ರಮಾಣದ ನೀರನ್ನು 21 ಗೇಟ್‌ಗಳ ಮೂಲಕ ಭೀಮಾ ನದಿಗೆ ನೀರು ಬಿಡಲಾಗುತ್ತಿದೆ. ಭೀಮಾ ಜಲಾಶಯದ ಸಾಮರ್ಥ್ಯ 3 ಟಿಎಂಸಿ ಅಡಿಗಳಷ್ಟಿದ್ದು, ಈಗಾಗಲೇ ಎರಡು ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ’ ಎಂದು ಬುಧವಾರ ತಿಳಿಸಿದ್ದಾರೆ.
‘ತಾಲ್ಲೂಕಿಮ ಮಣ್ಣೂರು ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನವನ್ನು ಭೀಮಾ ನದಿ ನೀರು ಸುತ್ತುವರಿದಿದೆ. ಆದರೆ ಇನ್ನೂ ದೇವಸ್ಥಾನದ ಗೇಟ್‌ವರೆಗೆ ನೀರು ಬಂದಿಲ್ಲ. ಬಹುಶಃ ಗುರುವಾರ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದರೆ ದೇವಿ ದರ್ಶನಕ್ಕೆ ತೊಂದರೆಯಾಗುವ ಸಾಧ್ಯತೆಗಳಿವೆ’ ಎಂದು ದೇವಸ್ಥಾನ ಸಮಿತಿ ಮುಖಂಡರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.