ADVERTISEMENT

ಕಲಬುರಗಿ: ಪ್ರಾಮಾಣಿಕ ರಾಜಕಾರಣಕ್ಕೆ ಸಿಗದ ಸಹಕಾರ; ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 5:51 IST
Last Updated 6 ಫೆಬ್ರುವರಿ 2023, 5:51 IST
ಕಲಬುರಗಿಯಲ್ಲಿ ಭಾನುವಾರ ‘ನಿರ್ಭಯ ಸಮಾಜವಾದದೆಡೆಗೆ ಬಿ.ಆರ್.ಪಾಟೀಲ ಜೀವನ ಕಥನ’ ಪುಸ್ತಕವನ್ನು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಭೀಮಾಶಂಕರ ಬಿಲಗುಂದಿ, ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ, ಕನೀಜ್ ಫಾತಿಮಾ, ಎಸ್.ಕೆ. ಕಾಂತಾ, ಶರಣಬಸಪ್ಪ ದರ್ಶನಾಪೂರ, ಅಲ್ಲಮಪ್ರಭು ಪಾಟೀಲ, ಡಾ. ಅಜಯ್ ಸಿಂಗ್, ಬಸವರಾಜ ದೇಶಮುಖ ಇದ್ದರು
ಕಲಬುರಗಿಯಲ್ಲಿ ಭಾನುವಾರ ‘ನಿರ್ಭಯ ಸಮಾಜವಾದದೆಡೆಗೆ ಬಿ.ಆರ್.ಪಾಟೀಲ ಜೀವನ ಕಥನ’ ಪುಸ್ತಕವನ್ನು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಭೀಮಾಶಂಕರ ಬಿಲಗುಂದಿ, ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ, ಕನೀಜ್ ಫಾತಿಮಾ, ಎಸ್.ಕೆ. ಕಾಂತಾ, ಶರಣಬಸಪ್ಪ ದರ್ಶನಾಪೂರ, ಅಲ್ಲಮಪ್ರಭು ಪಾಟೀಲ, ಡಾ. ಅಜಯ್ ಸಿಂಗ್, ಬಸವರಾಜ ದೇಶಮುಖ ಇದ್ದರು   

ಕಲಬುರಗಿ: ‘ಪ್ರಾಮಾಣಿಕ ರಾಜಕಾರಣಿಗಳನ್ನು ಬಯಸುವ ಜನರೇ ಪ್ರಾಮಾಣಿಕವಾಗಿ ರಾಜಕೀಯ ಮಾಡುವವರಿಗೆ ಬೆಂಬಲ ಕೊಡುತ್ತಿಲ್ಲ’ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ರೋಟರಿ ಕ್ಲಬ್ ಆವರಣದಲ್ಲಿ ಭಾನುವಾರ ಬಿ.ಆರ್‌.ಪಾಟೀಲ ಅಭಿಮಾನಿ ಬಳಗ ಆಯೋಜಿಸಿದ್ದ ಸಮಾ ರಂಭದಲ್ಲಿ ‘ನಿರ್ಭಯ ಸಮಾಜವಾದದೆಡೆಗೆ ಬಿ.ಆರ್.ಪಾಟೀಲ ಜೀವನ ಕಥನ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘1983ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದಾಗ ₹ 63 ಸಾವಿರ ಖರ್ಚು ಮಾಡಿದ್ದೆ. 2006ರ ಚುನಾವಣೆಯಲ್ಲಿ ಖರ್ಚು ಮಾಡಿದ ಹಣದ ಬಗ್ಗೆ ಹೇಳಲು ನನಗೆ ನಾಚಿಕೆ ಆಗುತ್ತದೆ. ಆಪರೇಷನ್ ಕಮಲದ ಹೆಸರಿನಲ್ಲಿ ಶಾಸಕರನ್ನು ₹ 25 ಕೋಟಿ ಕೊಟ್ಟು ಖರೀದಿಸುವ ಮಟ್ಟಕ್ಕೆ ಇವತ್ತಿನ ರಾಜಕಾರಣ ತಲುಪಿದೆ’ ಎಂದರು.

ADVERTISEMENT

‘ಮಹಾತ್ಮ ಗಾಂಧಿ ಅವರನ್ನು ಚುನಾವಣೆಗೆ ನಿಲ್ಲಿಸಿದರೆ, ಜನರು ಗಾಂಧಿ ಬಳಿಯೂ ದುಡ್ಡು ಕೇಳುತ್ತಾರೆ. ದುಡ್ಡಿಲ್ಲದೆ ಇದ್ದರೆ ನೀನೇಕೆ ನಿಂತಿದ್ದೀಯಾ ಎಂದು ಪ್ರಶ್ನಿಸುವ ಹಂತಕ್ಕೆ ಬಂದಿದೆ. 80ರ ದಶಕದಲ್ಲಿ ಚುನಾವಣೆ ಪ್ರಚಾರಕ್ಕೆ ಹಳ್ಳಿಗೆ ಹೋದಾಗ ಜನರು ವೀಳ್ಯದೆಲೆಯಲ್ಲಿ ಹಣ ಇಟ್ಟು ಕೊಡುತ್ತಿದ್ದರು. ಬೂತ್ ಖರ್ಚಿಗೆಂದು ₹ 200 ಕೊಟ್ಟರೆ, ‘ದುಡ್ಡು ಕೊಟ್ಟು ನಮ್ಮೂರಿಗೆ ಅವಮಾನ ಮಾಡಿತ್ತೀರಾ’ ಎನ್ನುತ್ತಿದ್ದರು. ಈಗ ಅಂತಹ ಪರಿಸ್ಥಿತಿ ಇಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಬಿ.ಆರ್. ಪಾಟೀಲ ಮಾತನಾಡಿ, ‘ಜಾತಿಗಳು ಮತ್ತಷ್ಟು ಗಟ್ಟಿ ಆಗುತ್ತಿದ್ದು, ಜಾತಿ–ಜಾತಿಗಳ ನಡುವೆ ಸಂಘರ್ಷ ನಡೆಯುತ್ತಿದೆ. ಸಾಮಾಜಿಕ ಸಾಮರಸ್ಯ ಮೂಡಿಸುವ ಕೆಲಸ ಮಾಡಬೇಕಿದೆ. ಚುನಾವಣೆಯಲ್ಲಿ ಸೋತರೂ ನಂಬಿದ ಸಿದ್ಧಾಂತಗಳನ್ನು ಬಿಡಬಾರದು’ ಎಂದರು.

‘ಸಮಾಜವಾದಿ ನಾಯಕರಾದ ಜಾರ್ಜ್‌ ಪರ್ನಾಂಡೀಸ್, ಶರದ್‌ ಯಾದವ್, ಪ.ಮಲ್ಲೇಶ್ ಹೋದರು. ಈಗ ನಾನು, ಸಿದ್ದರಾಮಯ್ಯ, ಎಸ್‌.ಕೆ. ಕಾಂತಾ ಅದೇ ಸಾಲಿನಲ್ಲಿ ಇದ್ದೇವೆ’ ಎಂದು ಹಾಸ್ಯಧಾಟಿಯಲ್ಲಿ ಹೇಳಿದರು.

ಮಾಜಿ ಸಚಿವ ಎಸ್.ಕೆ.ಕಾಂತಾ ಮಾತನಾಡಿ, ‘ಯುವಕರು ಜಾತಿ, ಸಂಪ್ರದಾಯವಾದಿಗಳು ‌ಆಗುತ್ತಿದ್ದಾರೆ. ಸಮಾಜವಾದ ಹೋರಾಟ ಈ ಹಿಂದಿಗಿಂತ ಪ್ರಸ್ತುತ ದಿನಗಳಲ್ಲಿ ಹೆಚ್ಚು ಅಗತ್ಯವಿದೆ’ ಎಂದರು.

ಪುಸ್ತಕದ ಲೇಖಕ ಗಿರೀಶ ಜಕಾಪುರೆ ಮಾತನಾಡಿ, 'ಮಹಾರಾಷ್ಟ್ರದ ಕನ್ನಡಿಗರು ಸೋಲಾಪುರ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡುವಂತೆ ಧ್ವನಿ ಎತ್ತುತ್ತಿದ್ದಾರೆ. ಆದರೆ, ಅಲ್ಲಿನ ಸರ್ಕಾರ ಕನ್ನಡಿಗರ ಧ್ವನಿ‌ ಹತ್ತಿಕ್ಕಲು ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಬಂಧನದ ಭೀತಿಯಿಂದ ಹಲವು ಹೋರಾಟ ಗಾರರು ತಲೆ ಮರೆಸಿಕೊಂಡು ಓಡಾಡು ತ್ತಿದ್ದಾರೆ. ಸೋಲಾಪುರದ ಕನ್ನಡಿಗರ ಬಗ್ಗೆ ಕರ್ನಾಟಕ ಸರ್ಕಾರ ಗಮನ ಹರಿಸಬೇಕು’ ಎಂದು ಕೋರಿದರು.

ಸಾಹಿತಿ ಆರ್‌.ಕೆ ಹುಡಗಿ ಕೃತಿ ಪರಿಚಯ ಮಾಡಿದರು. ಶಾಸಕರಾದ ಶರಣಬಸಪ್ಪ ದರ್ಶನಾಪುರ, ಪ್ರಿಯಾಂಕ್ ಖರ್ಗೆ, ಎಂ.ವೈ. ಪಾಟೀಲ, ಡಾ.ಅಜಯ ಸಿಂಗ್, ಖನೀಜ್ ಫಾತಿಮಾ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಎಚ್‌ಕೆಇ ಸಂಸ್ಥೆ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಕೆಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕಾರ, ಮುಖಂಡ ತಿಪ್ಪಣ್ಣಪ್ಪ ಕಮಕನೂರು ಇದ್ದರು.

‘ಹಿಂದುತ್ವ ಕೊಲೆ, ಹಿಂಸೆಗೆ ಪ್ರೋತ್ಸಾಹ’

‘ಮನುವಾದ ಮತ್ತು ಹಿಂದುತ್ವವು ಕೊಲೆ, ಹಿಂಸೆ ಮತ್ತು ತಾರತಮ್ಯಕ್ಕೆ ಪ್ರೋತ್ಸಾಹ ಕೊಡುತ್ತದೆ. ಹೀಗಾಗಿ, ನಾನು ಮನುವಾದ ಮತ್ತು ಹಿಂದುತ್ವದ ವಿರೋಧಿ ಹೊರತು, ಹಿಂದು ಧರ್ಮದ ವಿರೋಧಿ ಅಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

‘ಯಾವುದೇ ಧರ್ಮದಲ್ಲಿ ಕೊಲೆ, ಹಿಂಸೆಗೆ ಪ್ರೋತ್ಸಾಹ ಇಲ್ಲ. ಆದರೆ, ಮನುವಾದ ಮತ್ತು ಹಿಂದುತ್ವದಲ್ಲಿ ಇದೆ. ಇದುವೇ ಹಿಂದು ಧರ್ಮ ಮತ್ತು ಹಿಂದುತ್ವ ನಡುವೆ ಇರುವ ವ್ಯತ್ಯಾಸ. ಹಿಂದುತ್ವ ಮನುಷ್ಯತ್ವವನ್ನು ನಾಶ ಮಾಡುತ್ತದೆ’ ಎಂದರು.

*ಪ್ರಸ್ತುತ ರಾಜಕಾರಣದಲ್ಲಿ ಪ್ರಾಮಾಣಿಕ ಮತ್ತು ನಿಷ್ಠುರ ವಾಗಿ ಇದ್ದವರ ಸೋಲು ಖಚಿತ. ಮತದಾರರು ಪ್ರಾಮಾಣಿಕತೆ, ನಿಷ್ಠುರತೆ ಯನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಇಲ್ಲ

–ಸಿದ್ದರಾಮಯ್ಯ, ವಿಧಾನಸಭೆಯ ಪ್ರತಿಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.