ಪ್ರೊ.ರಮೇಶ ಲಂಡನಕರ್
ಕಲಬುರಗಿ: ‘ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳು ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಂಡು, ನನ್ನ ಪ್ರತಿಕ್ರಿಯೆಯೂ ಪಡೆಯದೆ ನನ್ನನ್ನು ಪ್ರಭಾರ ಕುಲಸಚಿವರ ಹುದ್ದೆಯಿಂದ ತೆರವುಗೊಳಿಸಿ ಬೇರೊಬ್ಬರನ್ನು ನಿಯೋಜನೆ ಮಾಡಿದ್ದಾರೆ’ ಎಂದು ಪ್ರಭಾರ ಕುಲಸಚಿವ ಪ್ರೊ.ರಮೇಶ ಲಂಡನಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಗುಲಬರ್ಗಾ ವಿವಿ ವಿರುದ್ಧ ಕಾರ್ಮಿಕ ಇಲಾಖೆ ಹೂಡಿದ್ದ ವ್ಯಾಜ್ಯ ಸಂಬಂಧದ ವಿಚಾರಣೆಗಾಗಿ ವಿಜಯಪುರಕ್ಕೆ ತೆರಳಿದ್ದೆ. ಅದೇ ದಿನ ಕುಲಸಚಿವರ ಹುದ್ದೆಯಿಂದ ನನ್ನನ್ನು ಕೆಳಗೆ ಇಳಿಸಿದ ಕುಲಪತಿಗಳು ಆದೇಶ ಹೊರಡಿಸಿದ್ದಾರೆ. ನನ್ನ ಮೇಲಿರುವ ಅಪಾದನೆಗಳು ಗುರುತರ ಅಲ್ಲದಿದ್ದರೂ ಇಂತಹ ಕ್ರಮ ತೆಗೆದುಕೊಂಡಿದ್ದು ಸರಿಯಲ್ಲ’ ಎಂದು ಕುಲಪತಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
‘ಅಧಿಕೃತವಾಗಿ ನ್ಯಾಯಾಲಯದ ಕಾರ್ಯಕಲಾಪದಲ್ಲಿ ಭಾಗಿಯಾಗಿರುವ ವೇಳೆಯಲ್ಲಿ ಕುಲಸಚಿವರ ಹುದ್ದೆಯಿಂದ ಬಿಡುಗಡೆಗೊಳಿಸಿರುವುದು ನ್ಯಾಯಯುತವಾಗಿರುವುದಿಲ್ಲ. ಸಿಂಡಿಕೇಟ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ತಿರುಚಿ ನಡಾವಳಿ ಮಾಡುತ್ತಿದ್ದಾಗಿ ಆರೋಪಿಸಲಾಗಿದೆ. ಸಭೆಯಲ್ಲಿನ ನಿರ್ಣಯಗಳನ್ನು ಜಾರಿಗೆ ತರಲು ವಿಫಲನಾಗಿದ್ದೆ ಎಂಬುದು ಸಹ ಅಪ್ಪಟ ಸುಳ್ಳು. ಹಾಗೇನಾದರೂ ಇದ್ದಲ್ಲಿ ಅವುಗಳ ಬಗ್ಗೆ ಇದುವರೆಗೆ ಜರುಗಿದ್ದ ಸಿಂಡಿಕೇಟ್ ಸಭೆಯಲ್ಲಿ ಸದಸ್ಯರು ನನಗೆ ಏಕೆ ಪ್ರಶ್ನಿಸಲಿಲ್ಲ’ ಎಂದು ಕೇಳಿದ್ದಾರೆ.
‘ನನ್ನ ಮೇಲಿರುವ ಸಿಂಡಿಕೇಟ್ ಸದಸ್ಯರುಗಳ ದೂರಿನ ಬಗ್ಗೆ ನನ್ನ ಹೇಳಿಕೆ ನೀಡಲು ಅವಕಾಶವನ್ನು ನೀಡಲಿಲ್ಲ. ಏಕಪಕ್ಷೀಯವಾಗಿ ಅವರ ಮನವಿ ಮೇರೆಗೆ ತಕ್ಷಣದಲ್ಲಿ ಆದೇಶ ಹೊರಡಿಸಿರುವುದು ಸರಿಯಾದ ಕ್ರಮವಲ್ಲ. ನನ್ನ ಪ್ರತಿಕ್ರಿಯೆ ಕೇಳದೆ, ವಿಚಾರಣಾ ತಂಡ ರಚಿಸಿ ಅದರ ವರದಿ ಪಡೆದು ಕ್ರಮವಹಿಸಲು ಮುಂದಾಗದಿರುವುದು ಕುಲಪತಿ ಹುದ್ದೆಯ ಅಧಿಕಾರದ ದುರುಪಯೋಗವಾಗಿದೆ’ ಎಂದು ಹೇಳಿದ್ದಾರೆ.
‘ಪ್ರೊ. ಚಂದ್ರಕಾಂತ ಎಂ. ಯಾತನೂರ ಅವರಿಗೆ ನನ್ನ ಹುದ್ದೆಯ ಕಾರ್ಯಭಾರವನ್ನು ತಕ್ಕ ಸೂಚನೆಯಿಲ್ಲದೆ ವಹಿಸಿಕೊಡಲು ಬರುವುದಿಲ್ಲ. ನಾನು ರಾಜೀನಾಮೆ ಸಲ್ಲಿಸಿಲ್ಲ, ಸೇವೆಯಿಂದ ನಿವೃತ್ತಿಯೂ ಆಗಿಲ್ಲ. ಹೀಗಾಗಿ, ತಾತ್ಕಾಲಿಕವಾಗಿ ತೆರವಾಗಿರುವ ಕುಲಸಚಿವರ ಹುದ್ದೆ ಎಂದು ನಮೂದಿಸಿ ಹೊರಡಿಸಿರುವ ಆದೇಶ ದೋಷಪೂರಿತವಾಗಿದೆ. ಈ ಆದೇಶವನ್ನು ಹಿಂಪಡೆಯಬೇಕು’ ಎಂದು ಕೋರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕುಲಪತಿಗೆ ಕರೆ ಮಾಡಿದರೂ ಪ್ರತಿಕ್ರಿಯೆಗೆ ಸಿಗಲಿಲ್ಲ.
ಎಐಡಿಎಸ್‌ಒ ಖಂಡನೆ
ಪ್ರೊ. ರಮೇಶ ಲಂಡನಕರ್ ಅವರನ್ನು ಏಕಾಏಕಿಯಾಗಿ ಪ್ರಭಾರ ಕುಲಸಚಿವರ ಸ್ಥಾನದಿಂದ ತೆಗೆದು ಹಾಕಿರುವುದನ್ನು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿಗಳ ಸಂಘಟನೆ (ಎಐಡಿಎಸ್‌ಒ) ಖಂಡಿಸಿದೆ.
ಕಳೆದ ಆರು ತಿಂಗಳಿಂದ ಕುಲಸಚಿವರಾಗಿ ರಮೇಶ್ ಅವರು ಮಾಡಿದ ಕಾರ್ಯಗಳಿಗೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಜನರಲ್ಲಿಯೂ ಅಭಿಮಾನ ಹೆಚ್ಚಿತ್ತು. ಏಕಾಏಕಿಯಾಗಿ ಅವರ ಕೆಲಸದ ಬಗ್ಗೆ ಆಪಾದನೆಗಳು ಬಂದಿರುವ ಕಾರಣ ನೀಡಿ ಅವರನ್ನು ಹುದ್ದೆಯಿಂದ ತೆಗೆದು ಹಾಕಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎನ್.ಕೆ. ತುಳಜರಾಮ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಅವರ ಮೇಲಿರುವ ಆಪಾದನೆಗಳು ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವುದು ಪ್ರಜಾತಾಂತ್ರಿಕ ಪ್ರಕ್ರಿಯೆ. ಅಂತಹ ನಡೆ ಅನುಸರಿಸದೆ ಏಕಾಏಕಿಯಾಗಿ ತೆಗೆದುಹಾಕಿರುವ ಬಗ್ಗೆ ವಿಶ್ವವಿದ್ಯಾಲಯ ಉತ್ತರಿಸಬೇಕು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.