
ಕಲಬುರಗಿ: ‘ಕೇಂದ್ರ ಸರ್ಕಾರವು ಕಳೆದ 11 ವರ್ಷಗಳಿಂದ ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿ ಜಿಲ್ಲೆ ಅಭಿವೃದ್ಧಿ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಕೇಂದ್ರ ಬಜೆಟ್‌ನಲ್ಲಿ ಜಿಲ್ಲೆಗೆ ಏಮ್ಸ್ ಸೇರಿದಂತೆ ವಿವಿಧ ಬೇಡಿಕೆಗಳನ್ನು ಪರಿಗಣಿಸಬೇಕು’ ಎಂದು ಕಲ್ಯಾಣ ನಾಡು ವಿಕಾಸ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್.ನಡಗೇರಿ ಒತ್ತಾಯಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2020ರ ಮದ್ರಾಸ್ ಹೈಕೋರ್ಟ್ ತೀರ್ಪುಗಳ ಪ್ರಕಾರ ದೇಶದ ಇಎಸ್‌ಐಸಿ ಆಸ್ಪತ್ರೆಗಳನ್ನು ಏಮ್ಸ್ ಆಗಿ ಮೇಲ್ದರ್ಜೆಗೆ ಏರಿಸಬೇಕು. ನಂಜುಂಡಪ್ಪ ಸಮಿತಿ ವರದಿಯಂತೆ ಕಲಬುರಗಿಯಲ್ಲಿ ಏಮ್ಸ್ ಸ್ಥಾಪಿಸಬೇಕು. ಬಿ.ಎಸ್.ಯಡಿಯೂರಪ್ಪ ಅವರು ಸಹ ಸಿಎಂ ಇದ್ದಾಗ 2020ರಲ್ಲಿ ಕೇಂದ್ರಕ್ಕೆ ಪತ್ರ ಬರೆದಿದ್ದರು. ಹಾಗಾಗಿ, ಎಲ್ಲಾ ಅರ್ಹತೆಗಳಿರುವ ಇಎಸ್‌ಐಸಿ ಆಸ್ಪತ್ರೆಯನ್ನು ಏಮ್ಸ್ ಮಾಡಬೇಕು’ ಎಂದರು.
‘ಕಲ್ಯಾಣ ಕರ್ನಾಟಕ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜೇವರ್ಗಿ–ಬಳ್ಳಾರಿ, ಬೀದರ್–ವಿಜಯಪುರ, ಲಾತೂರ್–ಕಲಬುರಗಿ–ಮೆಹಬೂಬ್ನಗರ ಮತ್ತು ಕಲಬುರಗಿ–ಯಾದಗಿರಿ–ರಾಯಚೂರು ನಡುವಿನ ರಾಷ್ಟ್ರೀಯ ಹೆದ್ದಾರಿಗಳನ್ನು ಚತುಷ್ಪಥ ಹೆದ್ದಾರಿಯಾಗಿ ಅಭಿವೃದ್ಧಿ ಮಾಡಬೇಕು. ಕಲಬುರಗಿ ನಗರಕ್ಕೆ ಎರಡನೇ ವರ್ತುಲ ರಸ್ತೆ ನಿರ್ಮಿಸಬೇಕು. ಹೊಸ ರೈಲು ಸೇವೆಗಳ ಜೊತೆಗೆ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿಯನ್ನು ಆರಂಭಿಸಬೇಕು. ವಿಮಾನಗಳ ಸಂಚಾರ ಪುನಃ ಆರಂಭಕ್ಕೆ ಉಡಾನ್ ಸೇವೆಯನ್ನು 10 ವರ್ಷಕ್ಕೆ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.
‘ರಾಜ್ಯ ಸರ್ಕಾರವು ಬೆಳಗಾವಿ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಿದರ್ಭ ಮಾದರಿ ವಿಶೇಷ ಅನುದಾನ ಕೇಳಲು ಕೇಂದ್ರ ಸರ್ಕಾರದ ಬಳಿ ನಿಯೋಗ ಹೋಗೋಣ ಅಂದಿದ್ದು, ಬಜೆಟ್ ಮಂಡನೆಗೂ ಮೊದಲು ಹೋಗಬೇಕು. ಅದೇ ರೀತಿ ಏಮ್ಸ್, ಚತುಷ್ಪಥ ಹೆದ್ದಾರಿ, ರೈಲ್ವೆ ವಿಭಾಗ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಸಹ ನಿಯೋಗ ತೆರಳಬೇಕು’ ಎಂದರು.
ಸಂಘದ ಜಿಲ್ಲಾಧ್ಯಕ್ಷ ಬಾಬು ಮದನಕರ್, ಜೈಭೀಮ ಮಾಳಗೆ, ಮೋಹನ ಸಾಗರ, ಪ್ರವೀಣ ಖೇಮನ, ನಾಗು ಡೊಂಗರಗಾಂವ್, ದತ್ತು ಜಮಾದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.