ADVERTISEMENT

ಯುವ ಮನಸ್ಸುಗಳಲ್ಲಿ ಪುಟಿದ ಆತ್ಮವಿಶ್ವಾಸ

ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್‌, ಇನ್‌ಸೈಟ್ಸ್‌ ಐಎಎಸ್ ಆಶ್ರಯದಲ್ಲಿ ನಡೆದ ‘ಯುಪಿಎಸ್‌ಸಿ ಪರೀಕ್ಷೆ; ಯಶಸ್ಸಿನ ಗುಟ್ಟು’ ಕಾರ್ಯಾಗಾರ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 2:01 IST
Last Updated 26 ನವೆಂಬರ್ 2021, 2:01 IST
ಪ್ರಾರ್ಥನಾ ಚಿದರಿ
ಪ್ರಾರ್ಥನಾ ಚಿದರಿ   

ಕಲಬುರಗಿ: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕೆಗಳ ಆಶ್ರಯದಲ್ಲಿ ‘ಇನ್‌ಸೈಟ್ಸ್‌ ಐಎಎಸ್’ ಸಂಸ್ಥೆಯ ಸಹಯೋಗದೊಂದಿಗೆ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಯುಪಿಎಸ್‌ಸಿ ಪರೀಕ್ಷೆ; ಯಶಸ್ಸಿನ ಗುಟ್ಟು’ ತರಬೇತಿ ಕಾರ್ಯಾಗಾರ ಅಭೂತಪೂರ್ವ ಯಶಸ್ಸು ಕಂಡಿತು. ಇಷ್ಟು ವರ್ಷ ತಾವು ಮನೆಯಲ್ಲೇ ಓದುತ್ತಿದ್ದ ಪತ್ರಿಕೆಗಳೇ ಇಂದು ತಮ್ಮೊಂದಿಗೆ ಮುಖಾಮುಖಿ ಆಗಲಿವೆ ಎಂಬ ಕಾತರ ಎಲ್ಲರ ಕಣ್ಣಲ್ಲೂ ಕಂಡುಬಂತು.

ಕಾರ್ಯಾಗಾರ ನಡೆದ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಕನಸುಗಳ ಜಾತ್ರೆಯೇ ಸೇರಿತು.ಯುವಹೃದಯಗಳು ಭವಿಷ್ಯಕ್ಕೆ ಸುಂದರ ಹಂದರ ಕಟ್ಟಿಕೊಳ್ಳಬೇಕು ಎಂಬ ಹಂಬಲದಿಂದ ಬಂದು ಸೇರಿದವು. ಕಲಬುರಗಿ, ಯಾದಗಿರಿ, ಬೀದರ್‌ ಹಾಗೂ ನೆರೆ ಜಿಲ್ಲೆಗಳಿಂದ ಧಾವಿಸಿದ ಯುವಕ, ಯುವತಿಯರಲ್ಲಿ ಹುಮ್ಮಸ್ಸು ಇಮ್ಮಡಿಗೊಂಡಿತು.

ಬೆಳಿಗ್ಗೆ 8ರ ಸುಮಾರಿಗೆ ವಿದ್ಯಾರ್ಥಿಗಳು, ಪರೀಕ್ಷಾರ್ಥಿಗಳು ಹಿಂಡುಹಿಂಡಾಗಿ ಬಂದರು. 11ರ ವರೆಗೂ ನಾ ಮುಂದೆ– ತಾ ಮುಂದು ಎಂದು ನೋಂದಣಿ ಮಾಡಿಕೊಂಡರು. ಕಾರ್ಯಾಗಾರದ ಕೊನೆ ಕ್ಷಣದವರೆಗೂ ಸಭಾಂಗಣ ಕಿಕ್ಕಿರಿದು ಸೇರಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌, ಉತ್ತರ ಉಪವಿಭಾಗದ ಎಸಿಪಿ ದೀಪನ್‌ ಎಂ.ಎನ್‌., ಇನ್‌ಸೈಟ್ಸ್ ಐಎಎಸ್ ಸ್ಥಾಪಕ ವಿನಯಕುಮಾರ್ ಜಿ.ಬಿ., ಸಂಪನ್ಮೂಲ ವ್ಯಕ್ತಿ ಶಮಂತಗೌಡ ಅವರ ವಿದ್ವತ್‌ಪೂರ್ಣ ಮಾತಿಗೆ ಮೆಚ್ಚಿದ ವಿದ್ಯಾರ್ಥಿಗಳು ಚಪ್ಪಾಳೆಗಳ ಮೂಲಕ ಅಭಿನಂದಿಸಿದರು.

ADVERTISEMENT

ಕೆಲವು ಪಾಲಕರೂ ತಮ್ಮ ಮಕ್ಕಳೊಂದಿಗೆ ಬಂದು ಆಲಿಸಿದರು. ಮಾರ್ಗದರ್ಶನದ ನಂತರ ನಡೆದ ಸಂವಾದದಲ್ಲಿ ಹಲವರು ಪ್ರಶ್ನೆಗಳನ್ನು ಕೇಳಿ ಉತ್ತರ ಕಂಡುಕೊಂಡರು. ಈಗಾಗಲೇ ಯುಪಿಎಸ್‌ಸಿ ಪರೀಕ್ಷೆ ಬರೆದು ಯಶಸ್ಸು ಲಭಿಸದವರು, ಹೊಸದಾಗಿ ಸಿದ್ಧತೆ ನಡೆಸಿದವರು ಕೂಡ ತಮ್ಮ ದುಗುಡ ದೂರ ಮಾಡಿಕೊಂಡರು. ಹಲವು ಪ್ರಶ್ನೆಗಳೊಂದಿಗೆ ಬಂದಿದ್ದ ಯುವ ಮನಸ್ಸುಗಳು ಭರವಸೆ ಮೂಟೆ ಹೊತ್ತು ಮರಳಿದವು. ಶಶಿಕಲಾ ಜಡೆ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಲತಾ, ಅರ್ಚನಾ ಪಾರ್ಥನೆ ಹಾಡಿದರು.

*

ಪರೀಕ್ಷಾರ್ಥಿಗಳ ಮನದಾಳ‌

ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದನ್ನು ತುಂಬ ಅಚ್ಚುಕಟ್ಟಾಗಿ ಬೋಧಿಸಿದರು. ನನ್ನಲ್ಲಿಯೂ ಈಗ ವಿಶ್ವಾಸ ಮೂಡಿದೆ. ನಾಳೆಯಿಂದಲೇ ಮತ್ತೆ ಹೊಸ ಹುಮ್ಮಸ್ಸಿನಿಂದ ಸಿದ್ಧತೆ ಮಾಡಿಕೊಳ್ಳುತ್ತೇನೆ‌.

–ಸಹನಾ ಟೆಂಗಳಿ, ವಿದ್ಯಾರ್ಥಿನಿ


ಐಎಎಸ್‌ ಪಾಸಾಗಬೇಕು ಎಂಬ ಗುರಿ ಇದ್ದವರಿಗೆ ಅದೊಂದೇ ಪರೀಕ್ಷೆ ಅಂತಿಮ ಎಂಬ ಕಲ್ಪನೆ ಇರುತ್ತದೆ. ನನ್ನಲ್ಲೂ ಇಂಥದ್ದೇ ವಿಚಾರವಿತ್ತು. ಆದರೆ, ಅದರಾಚೆಗೂ ಲೋಕಸೇವಾ ಆಯೋಗ ನಡೆಸುವ ವಿವಿಧ ಸ್ಪರ್ಧಾತ್ಮಕ ಪ‍ರೀಕ್ಷೆಗಳ ಬಗ್ಗೆ ಇಲ್ಲಿ ತಿಳಿದುಕೊಂಡೆ.

–ಯಶಸ್ವಿನಿ ಪಾಟೀಲ, ವಿದ್ಯಾರ್ಥಿನಿ


ಐಎಎಸ್‌, ಐಎಫ್‌ಎಸ್‌, ಕೆಎಎಸ್‌ ಮುಂತಾದ ಪರೀಕ್ಷೆಗಳಿಗೆ ಯಾವ ಪಠ್ಯ ಓದಬೇಕು ಎಂಬ ಬಗ್ಗೆ ಗೊಂದಲದಲ್ಲಿದ್ದೆ. ಪಠ್ಯದ ಮಾಹಿತಿ ಜತೆಗೆ, ಅವು ಎಲ್ಲಿ ಲಭ್ಯ ಎಂಬುದೂ ಈಗ ಗೊತ್ತಾಗಿದೆ. ಅದರಲ್ಲೂ ‘ಪ್ರಜಾವಾಣಿ’ ಕೊಡಮಾಡಿದ ಮಾಸ್ಟರ್‌ಮೈಂಡ್‌ ಆನ್‌ಲೈನ್‌ ನನ್ನ ನೆಚ್ಚಿನ ‍ಪತ್ರಿಕೆಯಾಗಿದೆ.

–ಸಿದ್ದರಾಜ ವಾಸುದೇವ, ಪರೀಕ್ಷಾರ್ಥಿ


‌ಈಗಾಗಲೇ ನಾನು ನೌಕರಿಯಲ್ಲಿದ್ದರೂ ಕೆಎಎಸ್‌ ಪಾಸಾಗುವ ಪ್ರಯತ್ನ ನಡೆಸಿದ್ದೇನೆ. ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ ಪ‍ತ್ರಿಕೆಗಳಿಂದ ನಡೆಸಿಕೊಟ್ಟ ಈ ಕಾರ್ಯಾಗಾರ ಹೆಚ್ಚು ಉಪಯುಕ್ತವಾಯಿತು. ನನ್ನ ಗುರಿಯ ಬಗ್ಗೆ ಈಗ ಸ್ಪಷ್ಟತೆ ಬಂದಿದೆ.

–ದೇವೇಂದ್ರ ಕವಲಗಿ, ಹೊನ್ನಳ್ಳಿ, ಪರೀಕ್ಷಾರ್ಥಿ


ಪದವಿ ಮುಗಿದ ಮೇಲೆಯೇ ಇಂಥ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಎಲ್ಲರ ರೂಢಿ. ಆದರೆ, ಪದವಿ ಆರಂಭದಿಂದಲೂ ಈ ಪರೀಕ್ಷೆಗಳಿಗೂ ತಯಾರಿ ಮಾಡಿಕೊಳ್ಳಬೇಕು ಎಂಬುದು ಸಾಧಕರನ್ನು ನೋಡಿ ಗೊತ್ತಾಯಿತು. ನನಗೂ ಈಗ ಸಾಕಷ್ಟು ಸಮಯವಿದೆ ಎಂಬ ಧೈರ್ಯ ಬಂತು.

–ಸಂಗೀತಾ ಪಂಪಣ್ಣ, ವಿದ್ಯಾರ್ಥಿನಿ


ನೂರಾರು ಪರೀಕ್ಷಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವಲ್ಲಿ ಈ ಪ್ರಯತ್ನ ಯಶಸ್ವಿಯಾಯಿತು. ನಾನು ಊಹಿಸಿದ್ದಕ್ಕಿಂತ ಹೆಚ್ಚು ಫಲ ನನಗೆ ಇಲ್ಲಿಂದ ಸಿಕ್ಕಿದೆ. ಮೇಲಿಂದ ಮೇಲೆ ‘ಪ್ರಜಾವಾಣಿ’ ಇಂಥ ಕಾರ್ಯಕ್ರಮ ಆಯೋಜಿಸಿದರೆ ನಮ್ಮಂಥ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತ.

–ವಿಜಯಕುಮಾರ ಗುಂಡೇಕರ, ಪರೀಕ್ಷಾರ್ಥಿ


ಕಾರ್ಯಾಗಾರದಲ್ಲಿ ನಮ್ಮ ಕಣ್ಣುಮುಂದೆಯೇ ಒಬ್ಬ ಸಾಧಕರನ್ನು ನೋಡುವುದೇ ಒಂದು ಚೈತನ್ಯ ನೀಡುತ್ತದೆ. ಅವರ ಸಾಧನಾ ಹಾದಿ ಕೇಳಿದ ಮೇಲೆ ನನ್ನ ವಿಶ್ವಾಸ ಹೆಚ್ಚಿದೆ.

–ಪ್ರಾರ್ಥನಾ ಪಂಡಿತರಾವ್‌ ಚಿದ್ರಿ, ಪರೀಕ್ಷಾರ್ಥಿ, ಬೀದರ್


ಲೋಕಸೇವಾ ಆಯೋಗ ನಡೆಸುವ ಬಹುಪಾಲು ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳು ಗೊಂದಲದಲ್ಲಿರುತ್ತಾರೆ. ಇದು ನನ್ನಿಂದ ಸಾಧ್ಯವೋ, ಇಲ್ಲವೋ ಎಂಬುದನ್ನು ಅವರೇ ಖಾತ್ರಿ ಮಾಡಿಕೊಳ್ಳದ ಸ್ಥಿತಿ ಇರುತ್ತದೆ. ‘ಪ್ರಜಾವಾಣಿ’ ಇಂದು ನಡೆಸಿಕೊಟ್ಟ ಈ ಮಾರ್ಗದರ್ಶಿ ಕಾರ್ಯಕ್ರಮದಿಂದ ಈ ಪರೀಕ್ಷೆಗಳ ‘ಬೇಸಿಕ್‌’ ಸಿದ್ಧತೆ ಏನಿರಬೇಕು ಎಂಬುದು ಗೊತ್ತಾಯಿತು.

–ಸುಜಾತಾ ಸ್ಥಾವರಮಠ, ಉದ್ಯೋಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.