ADVERTISEMENT

ಯಡ್ರಾಮಿ ತಹಶೀಲ್ದಾರ್‌ ಅಮಾನತಿಗೆ ಬಿಸಿಲು ನಾಡು ಹಸಿರು ಸೇನೆ ಸಂಘಟನೆ ಒತ್ತಾಯ

ಬಿಸಿಲು ನಾಡು ಹಸಿರು ಸೇನೆ ಸಂಘಟನೆಯ ಕಾರ್ಯಕರ್ತರಿಂದ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 1:59 IST
Last Updated 11 ಸೆಪ್ಟೆಂಬರ್ 2020, 1:59 IST
ಯಡ್ರಾಮಿ ತಹಶೀಲ್ದಾರ್ ಅಮಾನತಿಗೆ ಒತ್ತಾಯಿಸಿ ಬಿಸಿಲು ನಾಡಿನ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಯಡ್ರಾಮಿ ತಹಶೀಲ್ದಾರ್ ಅಮಾನತಿಗೆ ಒತ್ತಾಯಿಸಿ ಬಿಸಿಲು ನಾಡಿನ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ಯಡ್ರಾಮಿ ತಹಶೀಲ್ದಾರ್‌ ಬಸಲಿಂಗಪ್ಪ ನಾಯ್ಕೋಡಿ ಅವರು ಸಾರ್ವಜನಿಕರ ಕೆಲಸ ಮಾಡಿಸಿಕೊಡಲು ಸಾಕಷ್ಟು ಸತಾಯಿಸುತ್ತಿದ್ದು, ರೈತರಿಗೆ ಅವಹೇಳನ ಮಾಡುತ್ತಿದ್ದಾರೆ. ಆದ್ದರಿಂದ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಬಿಸಿಲು ನಾಡು ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ರೈತರು ಸರ್ಕಾರಿ ಜಮೀನುಗಳಲ್ಲಿ 30–40 ವರ್ಷಗಳಿಂದ ಉಳುಮೆ ಮಾಡುತ್ತಿದ್ದು, ಅವರಿಗೆ ಹಕ್ಕುಪತ್ರ ವಿತರಿಸುವ ಬದಲು ಮಾನಸಿಕ ಕಿರುಕುಳ ನೀಡುತ್ತಿದ್ದು, ತಮಗೆ ಬೇಕಾದವರಿಗೆ ಮಾತ್ರ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಜಾತಿ ಪ್ರಮಾಣಪತ್ರ ಕೇಳಲು ಬಂದ ವ್ಯಕ್ತಿಗೆ ತಮ್ಮ ಕಾರು ಚಾಲಕನ ಮೂಲಕ ಪೊಲೀಸ್‌ ಪ್ರಕರಣ ದಾಖಲಿಸಿದ್ದಾರೆ. ತಹಶೀಲ್ದಾರ್ ಅವರ ಕಿರುಕುಳ ತಾಳದೇ ಕಚೇರಿ ಸಿಬ್ಬಂದಿ ವರ್ಗಾವಣೆ ಪಡೆದು ಬೇರೆಡೆ ಹೋಗುತ್ತಿದ್ದಾರೆ ಎಂದರು.

ADVERTISEMENT

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ವೀರಣ್ಣ ಕೊರಳ್ಳಿ, ಜಿಲ್ಲಾ ಅಧ್ಯಕ್ಷ ವಿನೋದ ಪಾಟೀಲ, ಉಪಾಧ್ಯಕ್ಷ ಕಾಶಿನಾಥ ಜಾಧವ, ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಅವಧೂತ ಜಮಾದಾರ, ತಾಲ್ಲೂಕು ಘಟಕದ ಅಧ್ಯಕ್ಷ ಶಫೀಉಲ್ಲಾ ಎಂ. ದಖನಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.