ಕಲಬುರ್ಗಿ: ‘ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ ಅವರು ತಮ್ಮ ಕರ್ತವ್ಯದಲ್ಲಿ ನಿರಾಸಕ್ತಿ ವಹಿಸುತ್ತಿದ್ದು, ಜಿಲ್ಲಾಧಿಕಾರಿ ಅವರಿಗೂ ಅಸಹಕಾರ ತೋರಿಸುತ್ತಿದ್ದಾರೆ. ಎನ್.ಎ. ಮಾಡಿಕೊಡಲು ಹಣದ ಬೇಡಿಕೆ ಇಡುತ್ತಿದ್ದಾರೆ. ಆದ್ದರಿಂದ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಮಲ್ಲಿಕಾರ್ಜುನ ಎಸ್.ಸಾರವಾಡ ಅವರು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
‘ಜಿಲ್ಲೆಯ ಅಧಿಕಾರಿಗಳು, ತಹಶೀಲ್ದಾರ್‌ಗಳು ಹಾಗೂ ಕಚೇರಿ ಸಿಬ್ಬಂದಿಗೂ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಈ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು. ಬೇರೆಡೆ ವರ್ಗಾವಣೆ ಮಾಡಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಶಂಕರ ವಣಿಕ್ಯಾಳ, ‘ನನ್ನ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದರೂ ನಿತ್ಯ ರಾತ್ರಿ 1ರವರೆಗೂ ಬರುವ ಕರೆಗಳನ್ನು ಸ್ವೀಕರಿಸಿ ಕೋವಿಡ್ ರೋಗಿಗಳಿಗೆ ನೆರವಾಗುತ್ತಿದ್ದೇನೆ. 200 ಆಮ್ಲಜನಕ ಸಿಲಿಂಡರ್ ತರುವಂತೆ ಒಬ್ಬ ಸಿಬ್ಬಂದಿಗೆ ಹೇಳಿದ್ದೆ. ಅವರು ನಿರಾಕರಿಸಿದ್ದರಿಂದ ಶೋಕಾಸ್ ನೋಟಿಸ್ ನೀಡಿದ್ದೆ. ಇದಕ್ಕಾಗಿ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ’ ಎಂದರು.
‘ನನ್ನ ಮೇಲಿರುವ ಆರೋಪಗಳ ಬಗ್ಗೆ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ ಅವರು ತನಿಖೆ ನಡೆಸಬಹುದು. ಕೆಲವರು ಹಲವು ವರ್ಷಗಳಿಂದ ಇಲ್ಲಿಯೇ ಠಿಕಾಣಿ ಹೂಡಿದ್ದು, ತಾವೂ ಕೆಲಸ ಮಾಡುವುದಿಲ್ಲ. ಬೇರೆಯವರಿಗೂ ಕೆಲಸ ಮಾಡಲು ಬಿಡುವುದಿಲ್ಲ. ಅಂಥವರಿಗೆ ನಾನು ಮಗ್ಗಲು ಮುಳ್ಳಾಗಿದ್ದೇನೆ. ಅದಕ್ಕಾಗಿ ಈ ಆರೋಪ ಮಾಡಲಾಗುತ್ತಿದೆ. ನಿರಂತರ ಕೆಲಸದಿಂದ ನನ್ನ ಆರೋಗ್ಯದಲ್ಲಿ ವ್ಯತ್ಯಯವಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.