ಪ್ರಜಾವಾಣಿ ವಾರ್ತೆ
ಜೇವರ್ಗಿ: ನರೇಗಾದಡಿ ಕೆಲಸ ಮಾಡಿದ ಕೂಲಿಕಾರ್ಮಿಕರಿಗೆ ಕೂಲಿಹಣ ಬಿಡುಗಡೆ ಹಾಗೂ ಇನ್ನಿತರ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ತಾಲ್ಲೂಕಿನ ಹರನೂರ ಗ್ರಾಪಂ ಎದುರು ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಘಟಕದ ವತಿಯಿಂದ ನಡೆಸಲಾಗುತ್ತಿರುವ ಧರಣಿ ಶುಕ್ರವಾರ 5ನೇ ದಿನ ಪೂರೈಸಿತು.
ಮುಂಗಾರು ಬಿತ್ತನೆಗೆ ರೈತರಿಗೆ ಬೇಕಾಗಿರುವ ಬೀಜ ಗೊಬ್ಬರ ಸಮರ್ಪಕವಾಗಿ ವಿತರಿಸಬೇಕು. ಕಳಪೆಮಟ್ಟದ ಬೀಜ ಗೊಬ್ಬರ ಮಾರಾಟ ಮಾಡುವುದನ್ನು ತಡೆಗಟ್ಟಬೇಕು. ಬೀಜ, ಗೊಬ್ಬರದ ಅಭಾವ ಸೃಷ್ಟಿ ಮಾಡಿ ಬೆಲೆ ಏರಿಸುವುದನ್ನು ತಡೆಗಟ್ಟಬೇಕು. ಎರಡು ತಿಂಗಳಿಂದ ಬಾಕಿ ಇರುವ ಉದ್ಯೋಗ ಖಾತ್ರಿ ಕೂಲಿ ಹಣವನ್ನು ಬಿಡುಗಡೆಗೊಳಿಸಬೇಕು ಹಾಗೂ ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು. ನೆಟೆ ರೋಗದಿಂದ ಹಾಳಾದ ತೊಗರಿ ಬೆಳೆಗೆ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು. ಎಂಬಿತ್ಯಾದಿ ಬೇಡಿಕೆಗೆ ಒತ್ತಾಯಿಸಿ ಧರಣಿ ನಡೆಸಲಾಗುತ್ತಿದ್ದು, ಮಳೆ-ಗಾಳಿಯನ್ನು ಲೆಕ್ಕಿಸದೇ ಹೋರಾಟ ಮುಂದುವರಿಸಲಾಗುತ್ತಿದೆ. ಆದರೆ, ಈ ಜನಪರ ಹೋರಾಟವನ್ನು ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದು, ಸಂಬಂಧಪಟ್ಟವರು ಕೂಡಲೇ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸದೇ ಹೋದರೆ ಉಗ್ರಹೋರಾಟ ನಡೆಸಬೇಕಾಗುತ್ತದೆ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುಭಾಷ ಹೊಸಮನಿ ಎಚ್ಚರಿಸಿದರು.
ಪ್ರಾಂತ ರೈತ ಸಂಘದ ರೇವು ನಾಯಕ್ ಜಾಧವ್, ಮಲ್ಕಪ್ಪ ಹರನೂರ್, ಸಕ್ರೆಪ್ಪ ಮ್ಯಾಗೇರಿ, ಉಸ್ಮಾನ ಅಲಿ ಮುಜಾವರ್, ಭೀಮರಾಯ ದಾಸರ, ಮಲ್ಕಪ್ಪ ಮ್ಯಾಗೇರಿ, ಶ್ರೀಕಾಂತ ದಾಸರ್, ಈರಣ್ಣ ರಾಠೋಡ, ರಾಜು ಸಾಥಖೇಡ, ಬಸವರಾಜ ಹನ್ನೂರ, ಮರೆಮ್ಮ ತಳಕೇರಿ, ಬಸಮ್ಮ ಮ್ಯಾಗೇರಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.