ADVERTISEMENT

ಖಾಜಾ ಬಂದಾನವಾಜ್ ಉರುಸ್‌ಗೆ ಅದ್ದೂರಿ ಚಾಲನೆ

ಜನಸಾಮಾನ್ಯರ ದೊರೆಯ 619ನೇ ಉರುಸ್; ವಿವಿಧ ರಾಜ್ಯಗಳಿಂದ ಬಂದಿರುವ ಭಕ್ತರು

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 16:27 IST
Last Updated 5 ಜೂನ್ 2023, 16:27 IST
ಕಲಬುರಗಿಯಲ್ಲಿ ಸೋಮವಾರ ಹಜರತ್ ಖಾಜಾ ಬಂದಾನವಾಜ್‌ ಉರುಸ್‌ ಅಂಗವಾಗಿ ಮಹಾನಗರ ಪಾಲಿಕೆ ಉದ್ಯಾನದಿಂದ ದರ್ಗಾವರೆಗೆ ನಡೆದ ಸಂದಲ್‌ (ಗಂಧ) ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರು
–ಪ್ರಜಾವಾಣಿ ಚಿತ್ರಗಳು
ಕಲಬುರಗಿಯಲ್ಲಿ ಸೋಮವಾರ ಹಜರತ್ ಖಾಜಾ ಬಂದಾನವಾಜ್‌ ಉರುಸ್‌ ಅಂಗವಾಗಿ ಮಹಾನಗರ ಪಾಲಿಕೆ ಉದ್ಯಾನದಿಂದ ದರ್ಗಾವರೆಗೆ ನಡೆದ ಸಂದಲ್‌ (ಗಂಧ) ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರು –ಪ್ರಜಾವಾಣಿ ಚಿತ್ರಗಳು   

ಕಲಬುರ್ಗಿ: ಇಲ್ಲಿನ ಪ್ರಸಿದ್ಧ ಸೂಫಿ ಸಂತ, ಗೇಸುದರಾಜ (ಜನಸಾಮಾನ್ಯರ ದೊರೆ) ಎಂದು ಕರೆಸಿಕೊಳ್ಳುವ ಖಾಜಾ ಬಂದಾನವಾಜ್‌ ಅವರ 619ನೇ ಉರುಸ್‌ ಪ್ರಯುಕ್ತ ಸೋಮವಾರ ಸಂಜೆ ಇಲ್ಲಿನ ಸಾರ್ವಜನಿಕ ಉದ್ಯಾನದಿಂದ ಕೆಬಿಎನ್ ದರ್ಗಾವರೆಗೆ ಅದ್ದೂರಿ ಸಂದಲ್ (ಗಂಧದ) ಮೆರವಣಿಗೆ ನಡೆಯಿತು.

ತೆಲಂಗಾಣ, ಆಂಧ್ರಪ್ರದೇಶ, ದೆಹಲಿ, ಉತ್ತರಪ್ರದೇಶ ಸೇರಿದಂತೆ ದೇಶದ ವಿವಿಧೆಡೆಯಿಂದ ಬಂದ ಫಕೀರರು ಹಾಗೂ ಜನರು ಮೆರವಣಿಗೆಯುದ್ದಕ್ಕೂ ‘ಸುಂದೇಲಾಲ್‌ ಬಂದಾನವಾಜ್‌, ಸುಂದೇಲಾಲ್‌ ಬಂದಾನವಾಜ್‌...’ ಎಂದು ಘೋಷಣೆ ಕೂಗುತ್ತಾ ಮುನ್ನಡೆದರು.

ಖಾಜಾ ಬಂದಾನವಾಜರ ವಂಶಸ್ಥರು, ದರ್ಗಾ ಮುಖ್ಯಸ್ಥರೂ ಆದ ಡಾ. ಸೈಯದ್ ಷಾ ಖುಸ್ರೊ ಹುಸೇನಿ ಬಾಬಾ ಅವರು ಸಂದಲ್ ಮೆರವಣಿಗೆಗೆ ಚಾಲನೆ ನೀಡಿದರು. ಕೆಲವರು ವಿವಿಧ ಧ್ವಜಗಳನ್ನು ಹಿಡಿದು ಪಾಲ್ಗೊಂಡರೆ, ಇನ್ನೂ ಕೆಲವರು ನಾಲ್ಕು ಗ್ರಂಥಗಳನ್ನು ಪವಿತ್ರ ಬಟ್ಟೆಯಲ್ಲಿ ಸುತ್ತಿ ತಲೆಯ ಮೇಲೆ ಹೊತ್ತು ಸಾಗಿದರು.

ADVERTISEMENT

ಬಂದಾನವಾಜ್‌ ಅವರ ಉರುಸ್‌ ಕಲ್ಯಾಣ ಕರ್ನಾಟಕ ಪ್ರದೇಶದ ಹಿಂದೂ–ಮುಸ್ಲಿಮರ ಭಾವೈಕ್ಯದ ಜೀವಸೆಲೆ. ಸಂದಲ್ ಮೆರವಣಿಗೆಯಲ್ಲಿ ಮುಸ್ಲಿಮೇತರರೂ ಭಾಗವಹಿಸಿ ಭಾವೈಕ್ಯ ಸಾರಿದರು.

ಸಾರ್ವಜನಿಕ ಉದ್ಯಾನದಲ್ಲಿರುವ ಮೆಹಬೂಬ್ ಗುಲ್ಶನ್‌ನಿಂದ ಜಗತ್‌ ವೃತ್ತ, ಮಾರುಕಟ್ಟೆ ರಸ್ತೆ, ಹಳೆ ಭೋವಿ ಗಲ್ಲಿ, ಮುಸ್ಲಿಂ ಚೌಕ್‌, ದರ್ಗಾ ರಸ್ತೆ ಮೂಲಕ ಹಾದು ಬಂದಾನವಾಜರ ದರ್ಗಾಕ್ಕೆ ತಲುಪಿತು. ಹಲವು ಸೂಫಿ ಭಕ್ತರು ಕವ್ವಾಲಿ ಹಾಡಿದರು.

ಸೂಪರ್ ಮಾರ್ಕೆಟ್‌ನ ಮಸೀದಿಯಲ್ಲಿ ಕೆಲ ಹೊತ್ತು ಸಂದಲ್ ಮೆರವಣಿಗೆಯಲ್ಲಿದ್ದವರು ಸಾಮೂಹಿಕ ನಮಾಜ್ ಮಾಡಿದರು.

ಕಲಬುರಗಿ ಸುತ್ತಮುತ್ತಲಿನ ವಿವಿಧ ಧರ್ಮೀಯರು ಉರುಸ್ ಅಂಗವಾಗಿ ಬೆಳಿಗ್ಗೆಯಿಂದಲೇ ದರ್ಗಾಕ್ಕೆ ಭೇಟಿ ನೀಡಿದರು. ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಕೆಲ ಶಿಕ್ಷಣ ಸಂಸ್ಥೆಗಳು ಉರುಸ್ ನಿಮಿತ್ತ ತಮ್ಮ ಸಿಬ್ಬಂದಿಗೆ ಅರ್ಧ ದಿನದ ರಜೆ ಘೋಷಿಸಿದ್ದವು.

ಸಂದಲ್ ಮೆರವಣಿಗೆಯಲ್ಲಿ ಹಫೀಜ್ ಜನಾಬ್ ಸಯ್ಯದ್ ಮಹಮ್ಮದ್ ಅಲಿ ಅಲ್ ಹುಸೇನಿ ಸಾಹೇಬ್ ಜನಾಶೀನ್ ಇ ಸಜ್ಜಾದಾ ನಶೀನ್, ಡಾ. ಸಯ್ಯದ್ ಮುಸ್ತಫಾ ಅಲ್ ಹುಸೇನಿ, ಸಯ್ಯದ್ ಶಾ ಹಸನ್ ಶಬ್ಬೀರ್ ಹುಸೇನಿ, ಸಾಹೇಬ್ ಸಜ್ಜಾದಾ ನಶೀನ್ ರೋಜಾ ಎ ಇ ಖುರ್ದ್, ಅಮೀನ್ ಮಿಯಾಂ ಚಿಸ್ತಿ ಅಜ್ಮೀರ್ ಷರೀಫ್, ಸಯ್ಯದ್ ಮೊಹಮ್ಮದ್ ನಿಝಾಮಿ ಸಜ್ಜಾದಾ ನಶೀನ್, ಸಯ್ಯದ್ ನಿಜಾಮುದ್ದೀನ್ ಔಲಿಯಾ ದೆಹಲಿ, ಮುಫ್ತಿ ಖಲೀಲ್ ಅಹ್ಮದ್ ಸಾಹೇಬ್, ಶೈಕುಲ್ ನಿಜಾಮಿಯಾಂ, ಡಾ. ಮುಸ್ತಫಾ ಷರೀಫ್ ಸಾಹೇಬ್, ಸಯ್ಯದ್ ಶಾ ಶಫಿಉಲ್ಲಾ ಹುಸೇನಿ ಸಾಹೇಬ್, ಸಯ್ಯದ್ ಶಾ ರಹೀಮುಲ್ಲಾ ಹುಸೇನಿ, ಸಯ್ಯದ್ ಶಾ ತಖೀಉಲ್ಲಾ ಹುಸೇನಿ, ಸಯ್ಯದ್ ಬಗರ್ ಶಬ್ಬೀರ್ ಹುಸೇನಿ ಉರ್ಫ್ ನದೀಂ ಬಾಬಾ, ಸಯ್ಯದ್ ಅಲಿ ಝಾಕಿ ಹುಸೇನಿ ಓವೈಸಿ ಬಾಬಾ, ಮೀರ್ ರೌಫ್ ಅಲಿ ಖಾನ್, ಮೌಲಾನಾ ಅಬ್ದುಲ್ ರಷೀದ್ ಸಾಹೇಬ್, ಮೌಲಾನಾ ರೌಫ್ ಸಾಹೇಬ್, ಮೌಲಾನಾ ತನ್ವೀರ್ ಸಾಹೇಬ್ ಹಾಗೂ ಸಹಸ್ರಾರು ಅನುಯಾಯಿಗಳು ಭಾಗವಹಿಸಿದ್ದರು.

ಮೂರು ದಿನಗಳ ಉರುಸ್ ಅಂಗವಾಗಿ ಕೆಬಿಎನ್ ದರ್ಗಾ ಆವರಣದಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ಖಾಜಾ ಬಂದಾನವಾಜ್‌ ಉರುಸ್‌ ಅಂಗವಾಗಿ ನಡೆದ ಸಂದಲ್ (ಗಂಧ) ಸಂದರ್ಭದಲ್ಲಿ ಬಾಲಕ ಕಸರತ್ತು ‍ಪ್ರದರ್ಶಿಸಿದ ನೋಟ
ಖಾಜಾ ಬಂದಾನವಾಜ್‌ ಉರುಸ್‌ ಅಂಗವಾಗಿ ಮಹಾನಗರ ಪಾಲಿಕೆ ಉದ್ಯಾನ ಮೆಹಬೂಬ್ ಗುಲ್ಶನ್‌ನಲ್ಲಿ ಕೆಬಿಎನ್ ದರ್ಗಾ ಮುಖ್ಯಸ್ಥರಾದ ಡಾ. ಸೈಯದ್ ಷಾ ಖುಸ್ರೊ ಹುಸೇನಿ ಬಾಬಾ ಅವರು ಸಂದಲ್‌ಗೆ ಚಾಲನೆ ನೀಡಿದರು

Highlights - ಮೂರು ದಿನಗಳ ಉರುಸ್‌ಗೆ ಚಾಲನೆ ವಿವಿಧ ರಾಜ್ಯಗಳಿಂದ ಬಂದಿರುವ ಭಕ್ತರು ಭಾವೈಕ್ಯದ ಪ್ರತೀಕವಾದ ಖಾಜಾ ಬಂದಾನವಾಜ್ ಉರುಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.