ಕಲಬುರಗಿ: ಶ್ರಾವಣ ಮಾಸದ ಮೊದಲ ಶುಕ್ರವಾರ ಜಿಲ್ಲೆಯಾದ್ಯಂತ ಲಕ್ಷ್ಮಿ ಪೂಜೆ ನಡೆಯಲಿದ್ದು, ಈ ಅಂಗವಾಗಿ ಗುರುವಾರ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಕಂಡು ಬಂತು. ಮಾರುಕಟ್ಟೆಯಲ್ಲಿ ಬೆಳಿಗ್ಗೆ ಹಾಗೂ ಸಂಜೆ ಹೊತ್ತು ಕಿಕ್ಕಿರಿದ ಜನದಟ್ಟಣೆ ಇತ್ತು.
ಪಟ್ಟಣದ ಕಣ್ಣಿ ಮಾರ್ಕೆಟ್, ರಾಮ ಮಂದಿರ ವೃತ್ತ, ಲಾಲ್‌ಗೇರಿ ಕ್ರಾಸ್, ಸೂಪರ್ ಮಾರ್ಕೆಟ್‌ನಲ್ಲಿ ಜನರು ಲಕ್ಷ್ಮಿ ಪೂಜೆಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಬಾಳೆ ದಿಂಡು, ಮಾವಿನ ಎಲೆ, ಕಬ್ಬು, ತೆಂಗಿನ ಕಾಯಿ ಕೊಂಡುಕೊಂಡರು. ಜೊತೆಗೆ ಮಲ್ಲಿಗೆ, ದುಂಡುಮಲ್ಲಿಗೆ, ಸಂಪಿಗೆ, ಸೇವಂತಿ, ಗುಲಾಬಿ ಸೇರಿದಂತೆ ವಿವಿಧ ಬಗೆಯ ಹೂವುಗಳನ್ನು ಖರೀದಿಸಿದರು.
ಮಾರುಕಟ್ಟೆಯಲ್ಲಿ ಹಲವರು ವೈವಿಧ್ಯಮಯ ಲಕ್ಷ್ಮಿ ವಿಗ್ರಹಗಳನ್ನು ಖರೀದಿಸಿದರು. ಜೊತೆಗೆ ಪೂಜೆ ವೇಳೆ ಸಿಂಗರಿಸಲು ಬಗೆಬಗೆಯ ಪ್ಲಾಸ್ಟಿಕ್ ಹಾರಗಳು ಸೇರಿದಂತೆ ಹಲವು ಆಲಂಕಾರಿಕ ವಸ್ತುಗಳನ್ನು ಖರೀದಿಸಿದರು.
ಹೂವು–ಹಣ್ಣಿನ ದರ ಹೆಚ್ಚಳ:
ಲಕ್ಷ್ಮಿ ಪೂಜೆ ಅಂಗವಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ ಬೆನ್ನಲ್ಲೇ ಹೂವು–ಹಣ್ಣುಗಳ ದರ ಎಂದಿನಿಂದ ಗುರುವಾರ ತುಸು ಅಧಿಕವಾಗಿತ್ತು. ಪ್ರತಿ ಕೆ.ಜಿ ಏಲಕ್ಕಿ ಬಾಳೆಹಣ್ಣು ₹ 125, ಮಧ್ಯಮ ಗಾತ್ರದ ಸೇಬು 5ಕ್ಕೆ ₹ 125, ಮಧ್ಯಮ ಗಾತ್ರದ ಕಿತ್ತಳೆ ಹಣ್ಣು 6ಕ್ಕೆ ₹ 100 ಲೆಕ್ಕದಲ್ಲಿ ಮಾರಾಟವಾಯಿತು. ಮಲ್ಲಿಗೆ ಹೂವಿನ ಮಾಲೆ ₹ 20 ಒಂದು ಮೊಳದಂತೆ, ಸೇವಂತಿ ಹೂವಿನ ಮಾಲೆ ₹ 50ಕ್ಕೆ ಮೂರು ಮೊಳದಂತೆ ಮಾರಾಟವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.