
ಕಲಬುರಗಿ: ಕೇಂದ್ರ ಸರ್ಕಾರ ಜಾರಿಗೆ ತಂದ ವಿಬಿ ಜಿ ರಾಮ್ ಜಿ ರದ್ದು ಮಾಡಬೇಕು ಮತ್ತು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ)ಯನ್ನು ಪುನರ್ ಸ್ಥಾಪಿಸಬೇಕು ಎಂದು ಆಗ್ರಹಿಸಿ ಉದ್ಯೋಗ ಖಾತ್ರಿ ಕಾಯಕ ಜೀವಿಗಳ ಸಂಘಟನೆ ವತಿಯಿಂದ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್ ಮೀನಾ ಅವರಿಗೆ ಮನವಿ ಸಲ್ಲಿಸಲಾಗಿದೆ.
‘125 ದಿನಗಳಿಗೆ ಕೆಲಸದ ಅವಧಿ ಹೆಚ್ಚಳ ಮಾಡಲಾಗಿದೆ ಎಂದು ಪ್ರಚಾರ ಪಡೆಯಲಾಗುತ್ತಿದೆ. ಆದರೆ, ವಿಬಿ ಜಿರಾಮ್‌ಜಿಯಲ್ಲಿ ಕೃಷಿ ಋತುವಿನಲ್ಲಿ ಕಡ್ಡಾಯವಾಗಿ 60 ದಿನಗಳ ಕೆಲಸದ ನಿಷೇಧ ಇದೆ’ ಎಂದು ಸಂಘಟನೆಯ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
‘ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ಸೇರಿಸಿ ಮನರೇಗಾ ಬಲಿಷ್ಠಗೊಳಿಸಿ ವಾರದೊಳಗಾಗಿ ಪುನರ್ ಸ್ಥಾಪಿಸಬೇಕು. ನಗರಕ್ಕೂ ಉದ್ಯೋಗ ಖಾತ್ರಿ ಕಾಯ್ದೆಯನ್ನು ರೂಪಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಗ್ರಾ.ಪಂಗೆ ಕೆಲಸ ಕೇಳಲು ಮತ್ತು ನೀರು, ರಸ್ತೆ, ಶೌಚಾಲಯ ಮತ್ತಿತರ ಸಮಸ್ಯೆಗಳ ಪರಿಹಾರಕ್ಕಾಗಿ ಹೋದರೆ ಹೆದರಿಸಲಾಗುತ್ತಿದೆ. ಈಚೆಗೆ ಆಳಂದ ತಾಲ್ಲೂಕಿನ ಮೋಘಾ (ಕೆ) ಗ್ರಾ.ಪಂನಲ್ಲಿ ಇಕ್ಕಳಕಿ ಗ್ರಾಮದ ಜನರಿಂದ ಮನವಿ ಪತ್ರ ಸ್ವೀಕರಿಸಿಲ್ಲ. ಪಿಡಿಒ ವಿರುದ್ಧ ಕೂಡಲೇ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಮುಖರಾದ ಕೆ.ನೀಲಾ, ಪ್ರಭು ಖಾನಾಪುರೆ, ರೂಪಾ ಇಕ್ಕಳಕಿ, ಸುಜಾತಾ ಶಹಾಬಾದ್, ಪಾಂಡುರಂಗ ಮಾವಿನಕರ, ಲವಿತ್ರ ವಸ್ತ್ರದ, ಶೋಭಾ ಭೂಪಾಲತೆಗನೂರ, ಲವಕುಶ ಪಾಳಾ, ಸ್ವರಾಜ ಶಿವಲಿಂಗಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.