ADVERTISEMENT

ಕಲಬುರಗಿ: ಚುನಾವಣೆ ಬಹಿಷ್ಕರಿಸಿದ ಕುರಿಕೋಟಾ ಗ್ರಾ.ಪಂ ಸದಸ್ಯರು

10 ತಿಂಗಳಲ್ಲಿ ನಾಲ್ವರು ಪಿಡಿಒ ವರ್ಗ, ಅಧಿಕಾರಿಗಳ ಕ್ರಮಕ್ಕೆ ಪಂಚಾಯಿತಿ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 16:09 IST
Last Updated 4 ಡಿಸೆಂಬರ್ 2021, 16:09 IST
ಗಣೇಶ ಟಿ. ಚಿಕನಾಗಾಂವ
ಗಣೇಶ ಟಿ. ಚಿಕನಾಗಾಂವ   

ಕಲಬುರಗಿ: ‘ಕಮಲಾಪುರ ತಾಲ್ಲೂಕಿನ ಕುರಿಕೋಟಾದ ಪಿಡಿಒ ಅವರನ್ನು ಪದೇಪದೇ ವರ್ಗ ಮಾಡುತ್ತಿರುವ ಕ್ರಮ ಖಂಡಿಸಿ, ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರೂ ಈ ಬಾರಿ ವಿಧಾನ ಪ‍ರಿಷತ್‌ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದೇವೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ ಟಿ. ಚಿಕನಾಗಾಂವ ತಿಳಿಸಿದರು.

‘ಫೆಬ್ರುವರಿಯಿಂದ ಇಲ್ಲಿಯವರೆಗೆ ಹತ್ತು ತಿಂಗಳಲ್ಲಿ ನಾಲ್ವರು ಪಿಡಿಒಗಳನ್ನು ವರ್ಗಾಯಿಸಲಾಗಿದೆ. ಇತ್ತೀಚೆಗೆ ವರ್ಗವಾಗಿ ಬಂದ ಪ್ರಭಾರಿ ಪಿಡಿಒ ಶಿವಲಿಂಗಯ್ಯ ಮಠಪತಿ ಅವರನ್ನೂ ಮತ್ತೆ ವರ್ಗ ಮಾಡಲಾಗಿದೆ. ಇದರಿಂದ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳೇ ಆಗುತ್ತಿಲ್ಲ. ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಒಂದೇ ಗ್ರಾಮ ಪಂಚಾಯಿತಿ ಗುರಿಯಾಗಿ ಇಟ್ಟುಕೊಂಡು ಈ ರೀತಿ ಏಕೆ ಮಾಡಲಾಗುತ್ತಿದೆ ಎಂಬುದೂ ತಿಳಿಯುತ್ತಿಲ್ಲ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಒಬ್ಬ ಪಿಡಿಒ ಪ‍ಂಚಾಯಿತಿಗೆ ಬಂದು ಚಾರ್ಜ್‌ ತೆಗೆದುಕೊಂಡು, ಕೆಲಸ ಆರಂಭಿಸಲು ಕನಿಷ್ಠ ಎರಡು ತಿಂಗಳು ಬೇಕು. ಆದರೆ, ಪ್ರತಿ ಎರಡು ತಿಂಗಳಿಗೊಮ್ಮೆ ಅವರನ್ನು ಬದಲಾಯಿಸಿದರೆ ಅಭಿವೃದ್ಧಿ ಕೆಲಸ ಮಾಡಿಸುವುದಾದರೂ ಹೇಗೆ? ಮೇಲಧಿಕಾರಿಗಳ ಈ ಕ್ರಮ ಖಂಡಿಸಿ ಈ ಬಾರಿಯ ವಿಧಾನ ಪರಿಷತ್‌ ಚುನಾವಣೆ ಬಹಿಷ್ಕರಿಸಲು ಎಲ್ಲ ಸದಸ್ಯರೂ ಒಮ್ಮತರ ನಿರ್ಧಾರ ಕೈಗೊಂಡಿದ್ದೇವೆ. ಚುನಾವಣೆಗೂ ಮುಂಚೆಯೇ ಸಮಸ್ಯೆ ಸರಿಪಡಿಸಬೇಕು’ ಎಂದೂ ಆಗ್ರಹಿಸಿದರು.

ADVERTISEMENT

‘ಉತ್ತಮ ಕೆಲಸ ಮಾಡುತ್ತಿದ್ದ ಹಾಲಿ ಪಿಡಿಒ ಅವರ ವರ್ಗಾವಣೆಗೆ ಯಾವ ಸದಸ್ಯರೂ ಮನವಿ ಮಾಡಿಲ್ಲ. ‘ಗ್ರೇಡ್‌–2’ ಆಧಾರದ ಮೇಲೆ ವರ್ಗ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಆದರೆ, ಜಿಲ್ಲೆಯಲ್ಲಿ ಸಾಕಷ್ಟು ಪಂಚಾಯಿತಿಗಳಿಗೆ ಗ್ರೇಡ್‌–2 ಕಾರ್ಯದರ್ಶಿಗಳೇ ಇದ್ದಾರೆ. ಅವರೆಲ್ಲರನ್ನೂ ಏಕೆ ವರ್ಗ ಮಾಡಿಲ್ಲ ಎಂದು ಕೇಳಿದರೆ ಯಾರಿಂದಲೂ ಉತ್ತರ ಸಿಗುತ್ತಿಲ್ಲ’ ಎಂದೂ ದೂರಿದರು.

ಪಂಚಾಯಿತಿ ಉಪಾಧ್ಯಕ್ಷ ಮಹಾದೆವಪ್ಪ ಗುರುಲಿಂಗಪ್ಪ ಸೇರಿದಂತೆ ಎಲ್ಲ 14 ಸದಸ್ಯರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.