
ಕಾಳಗಿ: ತಾಲ್ಲೂಕಿನ ಕೊರವಿ ಗ್ರಾಮವು ಐತಿಹಾಸಿಕ ಕೊರವಂಜೇಶ್ವರಿದೇವಿ ಮಂದಿರದಿಂದ ಪ್ರಸಿದ್ಧಿ ಪಡೆದಿದೆ. ಆದರೆ, ಈ ಊರಿಗೆ ಬಂದುಹೋಗುವ ಹೊರಗಿನ ಭಕ್ತರಿಗೆ ಇಲ್ಲಿ ಬಸ್ ನಿಲ್ಲಿಸದೆ ಪರದಾಡುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬುಧವಾರ ಕರ್ನಾಟಕ ಪ್ರಾಂತ ರೈತ ಸಂಘದ ಆಶ್ರಯದಲ್ಲಿ ಕೊರವಿ ಕ್ರಾಸ್‌ನ ಕೋಡ್ಲಿ-ಸುಲೇಪೇಟ್ ನಡುವಿನ ರಾಜ್ಯಹೆದ್ದಾರಿ ತಡೆದು ಪ್ರತಿಭಟಿಸಿದ ಗ್ರಾಮಸ್ಥರು; ‘ಅಮಾವಾಸ್ಯೆಗೆ ಅಪಾರ ಭಕ್ತರು ದೇವಿ ದರ್ಶನಕ್ಕೆ ಹರಿದುಬರುತ್ತಾರೆ. ಆದರೆ, ಈ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ಕಲಬುರಗಿ, ಚಿಂಚೋಳಿ, ಕಾಳಗಿ ಘಟಕದ ಸರ್ಕಾರಿ ಬಸ್‌ಗಳು ಇಲ್ಲಿ ನಿಲ್ಲಿಸದೆ ಪ್ರಯಾಣಿಕರಿಗೆ ತೊಂದರೆ ನೀಡುತ್ತಿವೆ. ಕೂಡಲೇ ಎಲ್ಲ ತರಹದ ಬಸ್‌ಗಳು ಇಲ್ಲಿ ನಿಲ್ಲಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.
ಈ ದೇವಸ್ಥಾನವು ಸರ್ಕಾರ ಧಾರ್ಮಿಕ ದತ್ತಿ ಇಲಾಖೆಗೆ ಸೇರ್ಪಡೆ ಮಾಡಬೇಕು. ಕೊರವಿಯನ್ನು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿ ಮೇಲ್ದರ್ಜೆಗೇರಿಸಬೇಕು. ಬೆಲೆ ಘೋಷಣೆ ಮಾಡಬೇಕು. ಬೆಳೆ ನಷ್ಟದ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಹಾಕಬೇಕು, ರೈತರ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಿಂದಾಗಿ ಕೆಲಕಾಲ ಕಲಬುರಗಿ-ಚಿಂಚೋಳಿ ಮಾರ್ಗದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ವಿವಿಧೆಡೆಯ ಪ್ರಯಾಣಿಕರು ಪರದಾಡಿದರು.
ಪ್ರಮುಖರಾದ ಶರಣಬಸಪ್ಪ ಮಮಶೆಟ್ಟಿ, ಪರಮೇಶ್ವರ ಕಾಂತಾ, ದೇವಿಂದ್ರಪ್ಪ ಪಾಟೀಲ, ಗೋವಿಂದ ರಾಠೋಡ, ಅಶೋಕ ಗುತ್ತೇದಾರ, ದಶರಥ ಕೊರವಿ ಅನೇಕರು ಭಾಗವಹಿಸಿದ್ದರು. ಕಾಳಗಿ ತಹಶೀಲ್ದಾರ್ ಪೃಥ್ವಿರಾಜ ಪಾಟೀಲ, ಕೋಡ್ಲಿ ತಹಶೀಲ್ದಾರ್ ರವೀಂದ್ರ ಸ್ಥಳಕ್ಕೆ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.