ADVERTISEMENT

ದೃಶ್ಯಕಲೆಯೇ ಅಕ್ಷರದ ತಾಯಿ: ಡಾ.ಎಂ.ಎಸ್‌.ಮೂರ್ತಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 6:15 IST
Last Updated 14 ಜುಲೈ 2024, 6:15 IST
ಕಲಬುರಗಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಪ್ರೊ.ವಿ.ಜಿ.ಅಂದಾನಿಯವರನ್ನು ಸನ್ಮಾನಿಸಲಾಯಿತು. ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಂಸದ ರಾಧಾಕೃಷ್ಣ ದೊಡ್ಡಮನಿ, ಎಂ.ಎಸ್‌ ಮೂರ್ತಿ, ತೆಲಂಗಾಣ ಎಂಎಲ್‌ಸಿ ಸುರಭಿ ವಾಣಿದೇವಿ, ಶಾಸಕ ಅಲ್ಲಮಪ್ರಭು ಪಾಟೀಲ, ಜೆ.ಎಸ್‌.ಖಂಡೇರಾವ್‌, ಟಿ.ದೇವೇಂದ್ರ ಹಾಗೂ ಗಣ್ಯರು ಪಾಲ್ಗೊಂಡಿದ್ದರು–ಪ್ರಜಾವಾಣಿ ಚಿತ್ರ 
ಕಲಬುರಗಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಪ್ರೊ.ವಿ.ಜಿ.ಅಂದಾನಿಯವರನ್ನು ಸನ್ಮಾನಿಸಲಾಯಿತು. ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಂಸದ ರಾಧಾಕೃಷ್ಣ ದೊಡ್ಡಮನಿ, ಎಂ.ಎಸ್‌ ಮೂರ್ತಿ, ತೆಲಂಗಾಣ ಎಂಎಲ್‌ಸಿ ಸುರಭಿ ವಾಣಿದೇವಿ, ಶಾಸಕ ಅಲ್ಲಮಪ್ರಭು ಪಾಟೀಲ, ಜೆ.ಎಸ್‌.ಖಂಡೇರಾವ್‌, ಟಿ.ದೇವೇಂದ್ರ ಹಾಗೂ ಗಣ್ಯರು ಪಾಲ್ಗೊಂಡಿದ್ದರು–ಪ್ರಜಾವಾಣಿ ಚಿತ್ರ     

ಕಲಬುರಗಿ: ‘ಸಾಹಿತ್ಯ ಜ್ಞಾನಪೀಠದ ಮೇಲೆ ನಿಂತಿದೆ. ದೃಶ್ಯಕಲೆ ನಿಂತಿರುವುದು ಸಾಮಾನ್ಯ ಜ್ಞಾನದ ಮೇಲೆ. ಆದರೆ ದೃಶ್ಯಕಲೆಯೇ ಅಕ್ಷರದ ತಾಯಿ‘ ಎಂದು ರಾಜ್ಯ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಎಂ.ಎಸ್‌.ಮೂರ್ತಿ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಪ್ರೊ. ವಿ.ಜಿ.ಅಂದಾನಿಯವರ 75ನೇ ವರ್ಷದ ವಜ್ರಮಹೋತ್ಸವ ಸಮಾರಂಭದ ಅಂಗವಾಗಿ ನಡೆದ ‘ಬಯಲ ಬೆಳಕು’ ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರೊ. ವಿ.ಜಿ.ಅಂದಾನಿಯವರು ವಿದ್ಯಾರ್ಥಿಗಳೇ ಕಲಾಕೃತಿಗಳು ಎಂದು ಭಾವಿಸಿದ್ದರು. ವಿದ್ಯಾರ್ಥಿಗಳ ನಡತೆ, ಘನತೆಯಲ್ಲಿ ಅಂದಾನಿಯವರ ಯಶಸ್ಸು ಅಡಗಿದೆ. ಅಂದಾನಿಯವರು ದೃಶ್ಯ ಕಲಾ ಕುಲದ ಗೌರವವನ್ನು ನಾಡಿಗೆ ಎತ್ತಿ ಹಿಡಿದಿದ್ದಾರೆ. ಕೂಡುವುದನ್ನು ಕಲಿಸುವುದು ದೃಶ್ಯಕಲೆ. ಅವರ ಅಭಿನಂದನ ಗ್ರಂಥ ದೃಶ್ಯಕಲೆ ಚರಿತ್ರೆಯ ದಾಖಲೆ’ ಎಂದು ಬಣ್ಣಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ವೈದ್ಯಕೀಯ ಶಿಕ್ಷಣ, ಕೌಶಲಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ‘ಪ್ರೊ.ವಿ.ಜಿ.ಅಂದಾನಿಯವರು ಬಹಳ ಶ್ರದ್ಧೆ, ಶ್ರಮದಿಂದ ಕಲಾ ಸಂಸ್ಥೆ ಕಟ್ಟಿದ್ದಾರೆ. ಆ ಸಂಸ್ಥೆಯನ್ನು ಮುಂದಿನ ತಲೆಮಾರಿಗೆ ಕಾಯ್ದಿರಿಸುವುದು ನಮ್ಮ ಜವಾಬ್ದಾರಿ. ಸಂಸ್ಥೆಯ ಸಂರಕ್ಷಣೆಯ ಜವಾಬ್ದಾರಿಯನ್ನು ನಾವು ಮಾಡುತ್ತೇವೆ’ ಎಂದು ಹೇಳಿದರು.‌

ಅಭಿನಂದನ ಗ್ರಂಥ ಸಂಪಾದಕರಾದ ಕಾಶಿನಾಥ ಮಾತನಾಡಿ, ‘ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಚಿತ್ರಕಲಾ ಸ್ನಾತಕೋತ್ತರ ಪದವಿ ಕಲಬುರಗಿಯಲ್ಲಿ ಪ್ರಾರಂಭವಾಯಿತು. ಪ್ರೊ.ವಿ.ಜಿ.ಅಂದಾನಿಯವರು ಸಂಸ್ಥೆ ಮತ್ತು ವಿದ್ಯಾರ್ಥಿಗಳನ್ನು ಬಹಳ ಪ್ರೀತಿಸುತ್ತಿದ್ದರು. ಹೀಗಾಗಿ ಅವರ 75 ವಿದ್ಯಾರ್ಥಿಗಳಿಂದ ಅವರ ಕುರಿತು ಲೇಖನಗಳನ್ನು ಬರೆಯಿಸಿ ಅಭಿನಂದನ ಗ್ರಂಥ ಹೊರತರಲಾಗಿದೆ‘ ಎಂದು ತಿಳಿಸಿದರು.

ಅಭಿನಂದನ ಗ್ರಂಥದ ಮತ್ತೊಬ್ಬ ಸಂಪಾದಕರಾದ ಸತೀಶಕುಮಾರ ಪಿ.ವಲ್ಲೇಪುರೆ, ‘ವಿ.ಜಿ.ಅಂದಾನಿಯವರು ಸಾಮಾಜಿಕ, ಸಾಂಸ್ಕೃತಿಕ ವಲಯದ ಚಿರಪರಿಚಿತರು. ದೃಶ್ಯಕಲಾ ಲೋಕದ ದಿಗ್ಗಜರು’ ಎಂದು ಬಣ್ಣಿಸಿದರು.

ಕಲಬುರಗಿ ಲೋಕಸಭಾ ಕ್ಷೇತ್ರದ ನೂತನ ಸದಸ್ಯ ರಾಧಾಕೃಷ್ಣ ದೊಡ್ಡಮನಿಯವರು ಅಭಿನಂದನ ಗ್ರಂಥ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರೊ.ವಿ.ಜಿ.ಅಂದಾನಿಯವರ ಗುರುಗಳಾದ ಜೆ.ಎಸ್‌.ಖಂಡೇರಾವ್‌, ಸಹೋದರ ಶರಣಪ್ಪ ಅಂದಾನಿಯವರನ್ನು ಸನ್ಮಾನಿಸಲಾಯಿತು. ಮುಂಬೈ, ಪುಣೆ, ಹೈದರಾಬಾದ್‌, ದೆಹಲಿ ಸೇರಿದಂತೆ ದೇಶದ ವಿವಿಧೆಡೆಯಿಂದ ಬಂದಿದ್ದ ಪ್ರೊ. ಅಂದಾನಿಯವರ ಶಿಷ್ಯಬಳಗ ಗುರುಗಳನ್ನು ಸನ್ಮಾನಿಸಿತು.

ಕಾರ್ಯಕ್ರಮದಲ್ಲಿ ದಿ ಐಡಿಯಲ್‌ ಫೈನ್‌ ಆರ್ಟ್‌ ಸಂಸ್ಥೆ ಅಧ್ಯಕ್ಷ ರಾಜಶೇಖರ ಕೆ.ಪಾಟೀಲ, ಗೌತಮ ಅಂದಾನಿ, ರಾಜಕುಮಾರ ಅಂದಾನಿ, ಮು.ಗು.ಬಿರಾದಾರ, ಟಿ.ದೇವೇಂದ್ರ ಸೇರಿದಂತೆ ಪ್ರೊ. ಅಂದಾನಿಯವರ ಅಪಾರ ಶಿಷ್ಯಬಳಗ ಹಾಜರಿತ್ತು. ವರ್ಣಾ ಕಿರಣ ಧರ್ಮಿಗಿರಿ ಸ್ವಾಗತಗೀತೆ ಪ್ರಸ್ತುತಪಡಿಸಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಕಾರ್ಯಕ್ರಮ ನಿರೂಪಿಸಿದರು.

ಶಾಸಕರು ತೆರಳಿದ್ದಕ್ಕೆ ಬೇಸರ
ಸಮಾರಂಭದ ಮಧ್ಯದಲ್ಲಿಯೇ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಅನ್ಯ ಕಾರ್ಯದ ನಿಮಿತ್ತ ತೆರಳಿದರು. ಇದರಿಂದ ಬೇಸರಗೊಂಡ ಡಾ. ಎಂ.ಎಸ್‌.ಮೂರ್ತಿ ‘ಜನಪ್ರತಿನಿಧಿಗಳು ಕಲಾವಿದರೊಂದಿಗೆ ಹತ್ತು ನಿಮಿಷ ಕಳೆಯದಿರುವುದು ದುರಂತ’ ಎಂದು ತಮ್ಮ ಭಾಷಣದ ಮಧ್ಯೆಯೇ ಬೇಸರಿಸಿದರು.
‘ಕಲಾವಿದರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ’
ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರ ಪುತ್ರಿ ತೆಲಂಗಾಣ ವಿಧಾನ ಪರಿಷತ್‌ ಸದಸ್ಯೆ ಸುರಭಿ ವಾಣಿದೇವಿ ಮಾತನಾಡಿ ‘ಕಲಾವಿದರು ಸೃಷ್ಟಿಕರ್ತರು. ಆದರೆ ಅವರು ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಪ್ರೊ.ಅಂದಾನಿಯವರು ನನಗೆ 35 ವರ್ಷಗಳಿಂದ ಪರಿಚಿತರು. ಅವರ ಸಂಸ್ಥೆಯಲ್ಲಿಯೇ ನನ್ನ ಪುತ್ರಿ ಸ್ನಾತಕೋತ್ತರ ಪದವಿ ಪೂರೈಸಿದ್ದಾಳೆ. ಅವರ ಶಿಷ್ಯಂದಿರು ದೇಶದಾದ್ಯಂತ ಪಸರಿಸಿದ್ದಾರೆ. ರಮಣರೆಡ್ಡಿ ಎಂಬ ಅವರ ಶಿಷ್ಯ ಪ್ರಸ್ತುತ ಹೈದರಾಬಾದ್‌ ಕಲಾ ಸಮಾಜದ ಅಧ್ಯಕ್ಷರಾಗಿದ್ದಾರೆ. ಪ್ರೊ.ಅಂದಾನಿಯವರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ನಾನೂ ಕಲಾ ಕಾಲೇಜು ನಡೆಸುತ್ತಿದ್ದು ಅದಕ್ಕೆ ಅವರು ಮಾರ್ಗದರ್ಶನ ನೀಡಿದ್ದರು’ ಎಂದು ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.