ಶಹಬಾದ್: ಪರರ ಹಿತಕ್ಕಾಗಿ ಜೀವಿಸಿ ಭಾರತದ ಆಧ್ಯಾತ್ಮಿಕ ಚಿಂತನೆಗಳನ್ನು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪಸರಿಸಿದ ಸ್ವಾಮಿ ವಿವೇಕಾನಂದರುರಾಷ್ಟ್ರಭಕ್ತಿಯ ಪ್ರೇರಕ ಶಕ್ತಿ ಎಂದು ನಗರಸಭೆ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.
ನಗರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಬಿ ಸಂಗೀತ ಕಲಾ ಸಂಸ್ಥೆ ವತಿಯಿಂದ ಸ್ವಾಮಿ ವಿವೇಕಾನಂದ ಜನ್ಮದಿನ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವೇಕಾನಂದರ ಚಿಂತನೆಗಳು ಇಂದಿಗೂ ಪ್ರಸ್ತುತ. ಅವರ ಬದುಕು ಮತ್ತು ಬರಹದ ವಿಚಾರಗಳನ್ನು ಯುವಕರು ಅಧ್ಯಯನ ಮಾಡಬೇಕು. ಭಾರತದ ಶ್ರೇಷ್ಠ ಆದರ್ಶಗಳಾದ ಸೇವೆ ಮತ್ತು ತ್ಯಾಗಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದರು.
ಮಾತೃ ಪ್ರೇಮ ಮತ್ತು ದೇಶ ಭಕ್ತಿಯನ್ನು ವಿಶ್ವಕ್ಕೆ ಸಾರಿದ ವಿವೇಕಾನಂದರು, ಜ್ಞಾನದ ವಿಶ್ವವಿದ್ಯಾ ನಿಲಯ ಇದ್ದಂತೆ. ಯುವಕರು ಇದನ್ನು ಅರ್ಥೈಸಿಕೊಳ್ಳುವ ಮೂಲಕ ದೇಶ ಮುನ್ನಡೆಸುವ ಜವಾ ಬ್ದಾರಿ ಪಡೆದು ಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಮೌನೇಶ್ವರ ಸೋನಾರ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿನಾಥ ಪಾಟೀಲ, ಚಿಂತಕ ಲೋಹಿತ್ ಕಟ್ಟಿ,ಶಿಕ್ಷಕ ಗಿರಿಮಲ್ಲಪ್ಪ ವಳಸಂಗ, ಸಂಚಾಲಕ ಶಾಂತಪ್ಪ ಹಡಪದ, ಪ್ರಬುದ್ಧ ಚಿಂತನ ವೇದಿಕೆಯ ಅಧ್ಯಕ್ಷ ಭರತ್ ಧನ್ನಾ, ದ.ವಿ ಒಕ್ಕಟದ ಸಂಚಾಲಕ ಪೂಜಪ್ಪ ಮೇತ್ರೆ, ನಗರಸಭೆ ಸದಸ್ಯ ಶರಣು ವಸ್ತದ್, ರಾಜಶೇಖರ ದೇವರಮನಿ, ವಿಶ್ವನಾಥ ಹಡಪದ, ರಮೇಶ ಜೋಗದನಕರ್, ನಿವೃತ್ತ ಶಿಕ್ಷಕ ಸಿದ್ದಲಿಂಗಯ್ಯಸ್ವಾಮಿ ಹಿರೇಮಠ, ಬಸವರಾಜ ಕೊಲ್ಲೂರ್ ಇದ್ದರು.
ಪೂಜಾ ಮೋನಯ್ಯ, ದೇವಿಕಾ ಇಕ್ಕಳಗಿ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.