ADVERTISEMENT

ದಂಡೋತಿ: ಖಾಸಗಿ ಕ್ಲಿನಿಕ್, ಹೋಟೆಲ್, ಮಾಂಸದ ಅಂಗಡಿ ಬಂದ್

​ಪ್ರಜಾವಾಣಿ ವಾರ್ತೆ
Published 19 ಮೇ 2022, 13:31 IST
Last Updated 19 ಮೇ 2022, 13:31 IST
ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ವಾಂತಿ ಭೇದಿ ರೋಗ ಹರಡಿದ್ದರಿಂದ ವ್ಯಾಪಾರ ಮಾಡದಂತೆ ಹೋಟೆಲ್ ಬಂದ್ ಮಾಡಿಸಲಾಗಿದೆ.
ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ವಾಂತಿ ಭೇದಿ ರೋಗ ಹರಡಿದ್ದರಿಂದ ವ್ಯಾಪಾರ ಮಾಡದಂತೆ ಹೋಟೆಲ್ ಬಂದ್ ಮಾಡಿಸಲಾಗಿದೆ.   

ಚಿತ್ತಾಪುರ: ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಉಲ್ಭಣಿಸಿದ್ದ ವಾಂತಿಭೇದಿ ಹರಡುವಿಕೆ ನಿಯಂತ್ರಣಕ್ಕೆ ಬಂದಿದೆ. ಗ್ರಾಮದಲ್ಲೇ ಬೀಡುಬಿಟ್ಟ ತಾಲ್ಲಕೂ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ರೋಗವನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದೆ.

ಮೇ 2ರಂದು ಆರಂಭವಾಗಿದ್ದ ವಾಂತಿಭೇದಿ ಪ್ರಕರಣಗಳು, ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದವು. ನೂರಕ್ಕೂ ಹೆಚ್ಚು ಮಂದಿಗೆ ವಾಂತಿಭೇದಿ ಹರಡಿ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇದು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿತ್ತು. ಹೀಗಾಗಿ ಆರೋಗ್ಯ ಇಲಾಖೆ ತಂಡಗಳು ಗ್ರಾಮದಲ್ಲಿ ಬೀಡು ಬಿಟ್ಟು ರೋಗವನ್ನು ನಿಯಂತ್ರಣಕ್ಕೆ ತಂದಿವೆ.

ಗ್ರಾಮದಲ್ಲಿ ವಾಂತಿಭೇದಿ ಹರಡುತ್ತಿದೆ. ಹೀಗಾಗಿ ಖಾಸಗಿ ಕ್ಲಿನಿಕ್‌ನವರು ಯಾವುದೇ ರೀತಿಯ ಚಿಕಿತ್ಸೆ ನೀಡಬಾರದು. ಜತೆಗೆ ಕ್ಲಿನಿಕ್‌ಗಳನ್ನು ಬಂದ್‌ಗೊಳಿಸಬೇಕು. ಸೂಚನೆ ಕಡೆಗಣಿಸಿ ಚಿಕಿತ್ಸೆ ನೀಡುವುದು ಗಮನಕ್ಕೆ ಬಂದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಮರದೀಪ ಪವಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ADVERTISEMENT

ವಾಂತಿ ಭೇದಿ ಹರಡಿರುವುದು ಕಲುಷಿತ ನೀರು ಸೇವನೆಯಿಂದ ದೃಢಪಟ್ಟಿದೆ. ಹೀಗಾಗಿ ಗ್ರಾಮದ ಎಲ್ಲ ಹೋಟೆಲ್, ಚಹಾ ಮಾರುವ ಕೈಬಂಡಿ ಮತ್ತು ಮಾಂಸದ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಕುಡಿಯಲು ಯೋಗ್ಯವಲ್ಲದ ಮೂಲಗಳಿಂದ ಜನರು ನೀರು ಪಡೆಯಬಾರದು. ಇದೇ ಕಾರಣಕ್ಕೆ ತೆರೆದ ಬಾವಿಯನ್ನು ಸೀಲ್ ಮಾಡಿರುವುದರಿಂದ ವಾಂತಿ ಭೇದಿ ಹತೋಟಿಗೆ ಬಂದಿದೆ. ಗುರುವಾರ ಮತ್ತೆ ಇಬ್ಬರು ವಾಂತಿಭೇದಿಗೆ ತುತ್ತಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಜಿಲ್ಲಾ ಕಾಲರಾ ನಿಯಂತ್ರಣ ಅಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿ ನಿರಂತರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ಸಿಬ್ಬಂದಿಗೆ ಮಾರ್ಗದರ್ಶನ ಮಾಡಿದ್ದಾರೆ. ಜನರಲ್ಲಿ ಆರೋಗ್ಯ ಅರಿವು ಮೂಡಿಸಿದ್ದರಿಂದ ರೋಗ ಹತೋಟಿಗೆ ಬರಲು ಸಾಧ್ಯವಾಯಿತು ಎಂದು ಪಂಚಾಯಿತಿ ಆಡಳಿತದ ಮೂಲಗಳು ತಿಳಿಸಿವೆ.

ಗ್ರಾಮಸ್ಥರು ಮರಗಮ್ಮ ದೇವಿ ಮತ್ತು ಗ್ರಾಮ ದೇವತೆ ದ್ಯಾವಮ್ಮ ದೇವಿಗೆ ನೈವೇದ್ಯ, ಕಾಯಿ, ಕರ್ಪೂರ ಅರ್ಪಿಸಿ ರೋಗ ನಿಲ್ಲಲಿ ಎಂದು ಪ್ರಾರ್ಥಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.