ADVERTISEMENT

5ರಲ್ಲಿ 3 ಶಿಕ್ಷಣ ಸಂಯೋಜಕ ಹುದ್ದೆ ಖಾಲಿ

ಚಿತ್ತಾಪುರ: ಖಾಲಿ ಹುದ್ದೆಯಿಂದ ಆಡಳಿತಾತ್ಮಕ ತೊಂದರೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 5:06 IST
Last Updated 8 ಜುಲೈ 2025, 5:06 IST

ವಾಡಿ: ಚಿತ್ತಾಪುರ ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಹುದ್ದೆಗಳು ಕಳೆದ ಹಲವು ವರ್ಷಗಳಿಂದ ಖಾಲಿ ಬಿದ್ದಿದ್ದು ಶಿಕ್ಷಣ ಇಲಾಖೆ ಯೋಜನೆಗಳ ಅನುಷ್ಠಾನದಲ್ಲಿ ತೀವ್ರ ತೊಡಕು ಉಂಟಾಗುತ್ತಿದೆ.

ಶಿಕ್ಷಣ ಇಲಾಖೆ ಅಧಿಕಾರಿಗಳ ಕಚೇರಿ ಹಾಗೂ ಶಾಲೆಗಳ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸುವ ಶಿಕ್ಷಣ ಸಂಯೋಜಕ ಹುದ್ದೆಗಳ ಪೂರ್ಣ ಪ್ರಮಾಣದಲ್ಲಿ ಭರ್ತಿ ಸಾಧ್ಯವಾಗಿಲ್ಲ.

ತಾಲ್ಲೂಕಿನಲ್ಲಿ 5 ವಲಯಗಳ ಪೈಕಿ 3 ವಲಯಗಳಲ್ಲಿ ಸಂಯೋಜಕ ಹುದ್ದೆಗೆ ಭರ್ತಿ ಭಾಗ್ಯ ಒದಗಿ ಬಂದಿಲ್ಲ. ಗುಂಡಗುರ್ತಿ, ಕಾಳಗಿ ವಲಯ ಬಿಟ್ಟರೆ ನಾಲವಾರ, ಚಿತ್ತಾಪುರ ಹಾಗೂ ಶಹಾಬಾದ ವಲಯದಲ್ಲಿ ಸಂಯೋಜಕ ಹುದ್ದೆ ಭರ್ತಿಯಾಗದೇ ಉಳಿದಿದ್ದು ಆಡಳಿತಾತ್ಮಕ ಸಮಸ್ಯೆ ಸೃಷ್ಟಿಗೆ ಕಾರಣವಾಗುತ್ತಿದೆ. ಪ್ರಾಥಮಿಕ ವಿಭಾಗದ 2 ಹುದ್ದೆಗಳ ಪೈಕಿ ಎರಡೂ ಹುದ್ದೆಗಳು ಕಳೆದ 4 ವರ್ಷಗಳಿಂದ ಖಾಲಿ ಉಳಿದಿದ್ದರೆ ಪ್ರೌಢವಿಭಾಗದ ಮೂರರ ಪೈಕಿ ಒಂದು ಹುದ್ದೆ ಖಾಲಿ ಉಳಿದಿದೆ.

ADVERTISEMENT

ಶೈಕ್ಷಣಿಕ ಯೋಜನೆಗಳು ಕುಂಠಿತವಾಗದಂತೆ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿ ಸಿಆರ್‌ಪಿ, ಬಿಆರ್‌ಪಿ ಮತ್ತು ಶಿಕ್ಷಣ ಸಂಯೋಜಕರ ಮೇಲೆ ಇರುತ್ತದೆ. ಸಿಆರ್ ಪಿಯ 26 ಹುದ್ದೆಗಳ ಪೈಕಿ 23 ಹುದ್ದೆಗಳು ಖಾಲಿ ಇವೆ. ಜುಲೈ ಅಂತ್ಯಕ್ಕೆ ಮತ್ತೆ 3 ಹುದ್ದೆಗಳು ಖಾಲಿಯಾಗಲಿವೆ. ಹುದ್ದೆಗಳು ಖಾಲಿ ಇರುವುದರಿಂದ ಇನ್ನುಳಿದವರು ಒತ್ತಡದ ನಡುವೆ ಕಾರ್ಯ ನಿರ್ವಹಿಸುವಂತಾಗಿದೆ.

ಪ್ರಮುಖ ಹುದ್ದೆಗಳು ಖಾಲಿ ಇವೆ. ಆದರೆ ಯಾರೂ ಈ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಮಾತನಾ ಡಿದರೆ ಮೇಲಧಿಕಾರಿಗಳು, ಜನ ಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾ ಗುವ ಸಾಧ್ಯತೆಯಿದೆ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.