ಕಲಬುರಗಿ ಜಿಲ್ಲೆಯ ವಾಡಿಯಲ್ಲಿ ಹೆಸರುಕಾಳು ರಾಶಿ ಕಣಕ್ಕೆ ಹಳ್ಳದ ನೀರು ನುಗ್ಗಿರುವುದು
ವಾಡಿ: ಬುಧವಾರ ರಾತ್ರಿಯಿಡೀ ಸುರಿದ ಅಬ್ಬರದ ಮಳೆಯು ನಾಲವಾರ ವಲಯದಲ್ಲಿ ನಾನಾ ಅವಾಂತರ ಸೃಷ್ಟಿಸಿದೆ. ವಿವಿಧ ಗ್ರಾಮಗಳ ಹಲವು ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜಮೀನುಗಳಿಗೆ ನೀರು ನುಗ್ಗಿ ಇದ್ದ ಬೆಳೆಯನ್ನೆಲ್ಲಾ ಆಪೋಷನ ತೆಗೆದುಕೊಂಡಿದೆ.
ಕುಂಬಾರಹಳ್ಳಿ ಕೆರೆಯ ಕೊಡಿ ಒಡೆದು ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದೆ. ನಾಲವಾರ ಸಂಕನೂರು ರಸ್ತೆ ಮೇಲೆ ಕೆರೆ ನೀರು ಹರಿದು ಸಂಪರ್ಕ ಕಡಿತಗೊಂಡಿದೆ. ಬಳವಡಗಿ ಗ್ರಾಮಕ್ಕೆ ಹಿರೇಹಳ್ಳದ ನೀರು ಹೊಕ್ಕಿದ್ದು ಮಧ್ಯರಾತ್ರಿಯಿಂದಲೇ ಬಳವಡಗಿ ಮತ್ತು ಕೊಂಚೂರು ಸಂಪರ್ಕ ಕಡಿತಗೊಂಡಿದೆ. ಬಳವಡಗಿಯ ಸುಮಾರು 50ಕ್ಕೂ ಅಧಿಕ ಮನೆಗಳಿಗೆ ನೀರು ಹೊಕ್ಕು ಗ್ರಾಮಸ್ಥರು ತತ್ತರಿಸುವಂತೆ ಆಗಿದೆ.
ರಾಶಿ ಕಣ ಹೊಕ್ಕ ಹಳ್ಳ, ಅಪಾರ ಹಾನಿ :
ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಹೊರವಲಯದ ದರ್ಗಾದ ವಿಶಾಲ ಆವರಣದಲ್ಲಿನ ನೂರಾರು ರೈತರ ರಾಶಿಕಣಕ್ಕೆ ಹಳ್ಳದ ನೀರು ನುಗ್ಗಿದ್ದು ಹೆಸರು ಕೊಚ್ಚಿಕೊಂಡು ಹೋಗಿದೆ. ರಾಶಿ ಮಾಡಿ ಒಣಗಿಸಲು ಬಿಟ್ಟಿದ್ದ ಹೆಸರು ಮಳೆಯಿಂದ ಮತ್ತು ಹಿರೇಹಳ್ಳದ ರಭಸಕ್ಕೆ ಸಂಪೂರ್ಣ ಹಾಳಾಗಿದೆ.
ಸ್ಥಳೀಯ ರೈತರಾದ ಮುನಿಂದ್ರ ಕೊಟಗಿ, ರಸೂಲ್ ಪಟೇಲ, ಶಿವಯೋಗಿ ಹೊಸೂರ, ಬಸವರಾಜ ಹೂಗಾರ, ವಾಡಿ ಸಾಹೇಬ್ ಹಾಗೂ ಹತ್ತಕ್ಕೂ ಅಧಿಕ ರೈತರ ಹೆಸರು ಬೆಳೆ ಸಂಪೂರ್ಣ ಹಾಳಾಗಿದೆ. ನೀರಿನಿಂದ ತೊಯ್ದು ತೊಪ್ಪೆಯಾದ ಹೆಸರು ಕಂಡು ರೈತರು ಮಮ್ಮಲ ಮರುಗುತ್ತಿದ್ದಾರೆ.
ಪರಿಹಾರಕ್ಕೆ ರೈತಸಂಘ ಒತ್ತಾಯ:
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಐಕೆಕೆಎಂಎಸ್ ರೈತ ಸಂಘಟನೆ ಮುಖಂಡರು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರನ್ನು ಸಂಪರ್ಕಿಸಿ ಹಳ್ಳದ ನೀರಿನಿಂದ ಬೆಳೆ ಹಾಳಾಗಿದ್ದು ಬೆಳೆನಷ್ಟಕ್ಕೆ ಒಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.