
ವಾಡಿ: ಎರಡು ವಾರಗಳಿಂದ ಸುರಿಯುತ್ತಿರುವ ಮಳೆಯಿಂದ ಮುಂಗಾರು ಹಂಗಾಮಿನ ಬೆಳೆಗಳು ಕೊಚ್ಚಿ ಹೋಗಿದ್ದು, ತಾಲ್ಲೂಕಿನ ರೈತರು ಬೆಳೆವಿಮೆ ಆಸರೆಯ ನಿರೀಕ್ಷೆಯಲ್ಲಿದ್ದಾರೆ.
ಪ್ರಚಾರ ಮಾಡಿ ಸಂಕಷ್ಟದಲ್ಲಿರುವ ರೈತರು ಬೆಳೆವಿಮೆ ತುಂಬುವಂತೆ ಮಾಡಿರುವುದು ಒಂದೆಡೆಯಾದರೆ, ಬೆಳೆಹಾನಿಯಾದ ಮೇಲೆ ಪರಿಹಾರ ಕೊಡುವುದಿರಲಿ, ಕನಿಷ್ಟ ಪಕ್ಷ ರೈತರ ದೂರು ದಾಖಲೆಗೂ ಸ್ಪಂದನೆ ನೀಡದೇ ಇರುವುದು ರೈತರನ್ನು ಪರದಾಡುವಂತೆ ಮಾಡಿದೆ.
‘ವಿಮಾ ಕಂಪನಿ ವಿಮೆ ಕಟ್ಟಿಸಿಕೊಳ್ಳುವಲ್ಲಿ ತೋರುವ ಆಸಕ್ತಿ ದೂರು ಸ್ವೀಕರಿಸುವಲ್ಲಿ ತೋರುತ್ತಿಲ್ಲ. ಕಷ್ಟದಲ್ಲಿ ಕೈ ಹಿಡಿಯಬೇಕಾದ ವಿಮಾ ಕಂಪನಿ ರೈತರ ದೂರು ಪಡೆಯಲು ತಾಂತ್ರಿಕ ಕಾರಣ ಮುಂದೆ ಇಟ್ಟು ಸತಾಯಿಸುತ್ತಿದೆ’ ಎಂದು ರೈತರು ದೂರುತ್ತಿದ್ದಾರೆ.
ಬೆಳೆ ಹಾನಿಗೊಳಗಾದ ತಾಲ್ಲೂಕಿನ 20,463 ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲು ಭಿಮಾ ಯೋಜನೆ ಅಡಿಯಲ್ಲಿ ವಿಮೆ ಹಣ ಪಾವತಿಸಿ ಹೆಸರು ನೋಂದಾಯಿಸಿದ್ದಾರೆ. ₹6.82 ಕೋಟಿ ಪ್ರಿಮಿಯಮ್ ಕಟ್ಟಲಾಗಿದೆ. ಒಟ್ಟು 26,928 ಹೇಕ್ಟರ್ ಪ್ರದೇಶ ವಿಮೆ ವ್ಯಾಪ್ತಿಗೊಳಪಡಿಸಲಾಗಿದೆ. ಅದರಲ್ಲಿ ತೊಗರಿ 22,748 ಹೇಕ್ಟರ್ ವಿಮೆಗೊಳಪಟ್ಟಿದೆ.
ಬೆಳೆಹಾನಿ ದೂರು ದಾಖಲಿಸಲು ಕಂಪನಿಯಿಂದ ನೀಡಿದ ಸಹಾಯವಾಣಿ ಸಂಖ್ಯೆ ಕರೆ ಮಾಡಿದಾಗ ರೈತರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದು ಮಳೆಗಾಲದ ಮಧ್ಯೆ ತಾಲ್ಲೂಕಿನ ರೈತರನ್ನು ಕಚೇರಿಗಳಿಗೆ ಅಲೆದಾಡುವಂತೆ ಮಾಡಿದೆ.
ಮುಂಗಾರು ಬೆಳೆಗಳನ್ನು ಮಳೆಯು ಆಪೋಷನ ತೆಗೆದುಕೊಳ್ಳುತ್ತಿದ್ದು ಬೆಳೆನಷ್ಟ ದೂರು ದಾಖಲಿಸಲು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವು ರೈತರು ಇಡೀ ದಿನ ಪ್ರಯತ್ನ ಪಟ್ಟಿದ್ದರೂ ಕನೆಕ್ಟ್ ಆಗುತ್ತಿಲ್ಲ ಎಂದು ರೈತರು ದೂರಿದ್ದಾರೆ. ಆ.19ರವರೆಗೆ ಕೇವಲ 5 ಸಾವಿರ ಜನ ರೈತರು ಮಾತ್ರ ದೂರು ದಾಖಲಿಸಿದ್ದಾರೆ.
ಸಹಾಯವಾಣಿ ದೂರು ಸಾಧ್ಯವಾಗದಿದ್ದರೆ ನೇರವಾಗಿ ತಾಲ್ಲೂಕು ಕೃಷಿ ಇಲಾಖೆ ಕಚೇರಿಗೆ ಬಂದು ದಾಖಲೆ ಸಲ್ಲಿಸಿ ದೂರು ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದು, ರೈತರಿಗೆ ಇದು ಹೊರೆಯಾಗುತ್ತಿದೆ. ಕೆಲದಿನಗಳಿಂದ ಬಿಟ್ಟುಬಿಡದೆ ಮಳೆ ಸುರಿಯುತ್ತಿದ್ದರಿಂದ ತಾಲ್ಲೂಕು ಕಚೇರಿಗೆ ತೆರಳಿ ದೂರು ನೀಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ರೈತರು.
ಸರ್ಕಾರ ತಕ್ಷಣ ವಿಮಾ ಕಂಪನಿಗಳಿಗೆ ಸೂಚನೆ ನೀಡಿ ರೈತರನ್ನು ಅಲೆದಾಡಿಸದೇ ಸಹಾಯವಾಣಿ ಮೂಲಕವೇ ದೂರು ದಾಖಲಿಸಿಕೊಂಡು ಪರಿಹಾರ ಪ್ರಕ್ರಿಯೆ ಸರಳಗೊಳಿಸಬೇಕು ಎನ್ನುವುದು ರೈತರ ಒತ್ತಾಯವಾಗಿದೆ.
ಸಹಾಯವಾಣಿ ಸಂಖ್ಯೆ ಇಡೀ ರಾಜ್ಯಕ್ಕೆ ಕೇವಲ ಒಂದೇ ಇದ್ದು ಸಂಪರ್ಕದಲ್ಲಿ ಕೆಲವೊಮ್ಮೆ ಸಮಸ್ಯೆ ಕಂಡುಬರುತ್ತಿದೆ. ಕೃಷಿ ಇಲಾಖೆಯಲ್ಲೇ ವಿಮಾಕಂಪನಿ ಪ್ರತಿನಿಧಿ ಇದ್ದು ರೈತರು ನೇರವಾಗಿ ಕಚೇರಿಗೆ ಭೇಟಿ ಕೊಟ್ಟು ದೂರು ದಾಖಲಿಸಬಹುದಾಗಿದೆ.–ಸಂಜೀವಕುಮಾರ ಮನಕಾರೆ, ಸಹಾಯಕ ನಿರ್ದೇಶಕ ಕೃಷಿ ಇಲಾಖೆ.ಚಿತ್ತಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.