ADVERTISEMENT

ಅಫಜಲಪುರ: 40 ಹಳ್ಳಿಗಳಲ್ಲಿ ನೀರಿಗೆ ಸಮಸ್ಯೆ

ಶಿವಾನಂದ ಹಸರಗುಂಡಗಿ
Published 13 ಮಾರ್ಚ್ 2019, 11:08 IST
Last Updated 13 ಮಾರ್ಚ್ 2019, 11:08 IST
ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ಹತ್ತಿರ ಭೀಮಾ ನದಿ ಬತ್ತಿದೆ
ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ಹತ್ತಿರ ಭೀಮಾ ನದಿ ಬತ್ತಿದೆ   

ಅಫಜಲಪುರ: ಪಟ್ಟಣಕ್ಕೆ ಮತ್ತು ತಾಲ್ಲೂಕಿನ ಸುಮಾರು 40 ಹಳ್ಳಿಗಳಿಗೆ ನೀರು ಒದಗಿಸುತ್ತಿರುವ ಭೀಮಾ ನದಿ ಬತ್ತುತ್ತಿದೆ. ಸೊನ್ನ ಭೀಮಾ ಬ್ಯಾರೇಜ್‌ನಲ್ಲಿ ನೀರು ಕಡಿಮೆ ಆಗುತ್ತಿದೆ. ಏಪ್ರಿಲ್‌, ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣವಾಗಲಿದೆ.

ಸದ್ಯಕ್ಕೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಭೀಮಾ ನದಿ ದಡದ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೊರೈಕೆ ಕಡಿತ ಮಾಡಿದ್ದಾರೆ. ಆದರೆ ಇದರಿಂದ ನದಿ ದಂಡೆಯ ಜನ– ಜಾನುವಾರುಗಳು ನೀರಿಗೆ ಪರದಾಡುವಂತಾಗಿದೆ.

ಭೀಮಾ ನದಿ ಬತ್ತುತ್ತಿರುವುದರಿಂದ ನದಿ ದಡದ ಗ್ರಾಮಗಳ ಕೊಳವೆ ಬಾವಿಗಳಲ್ಲೂ ನೀರು ಬತ್ತಿ ಹೋಗುತ್ತಿವೆ. ಭೀಮಾ ಬ್ಯಾರೇಜ್‌ನಲ್ಲಿ ನೀರು ಕಡಿಮೆಯಾಗುತ್ತಿದೆ. ನಿಂತ ನೀರು ಮಲಿನವಾಗಿರುವುದರಿಂದ ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ.

ADVERTISEMENT

ಅಫಜಲಪುರ ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ಸೊನ್ನ ಭೀಮಾ ಬ್ಯಾರೇಜ್‌ನಿಂದ ಪ್ರತಿ 15 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಆದರೆ ಆ ನೀರು ಪಟ್ಟಣಕ್ಕೆ ನೀರು ಪೊರೈಸುವ ಜಾಕ್‌ವೆಲ್ ಹತ್ತಿರ ತಡೆಗೋಡೆ ಇಲ್ಲದ ಕಾರಣ ನೇರವಾಗಿ ಹರಿದು ಮುಂದೆ ಹೋಗುತ್ತದೆ. ಹೀಗಾಗಿ ನೀರನ್ನು ಸರಿಯಾಗಿ ಬಳಸಲು ಆಗುತ್ತಿಲ್ಲ. 20 ವರ್ಷಗಳ ಹಿಂದೆ ನಿರ್ಮಿಸಿದ ತಡೆಗೋಡೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.

‘ಭೀಮಾ ಬ್ಯಾರೇಜ್‌ನಲ್ಲಿ ಸದ್ಯಕ್ಕೆ 0.98 ಟಿ.ಎಂ.ಸಿ. ನೀರು ಲಭ್ಯ ಇದೆ. ಪಟ್ಟಣಕ್ಕೆ ಕುಡಿಯುವ ನೀರಿಗಾಗಿ 15 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ದಿನದಿಂದ ದಿನಕ್ಕೆ ನೀರು ಕಡಿಮೆಯಾಗುತ್ತಿರುವುದರಿಂದ ಜನರು ನೀರನ್ನು ಹಿತಮಿತವಾಗಿ ಬಳಸಬೇಕು. ಕೃಷಿಗೆ ಬಳಸದಿದ್ದರೆ ಬೇಸಿಗೆ ಮುಗಿಯುವವರೆಗೂ ಕುಡಿಯುವ ನೀರು ಪೊರೈಸಬಹುದು’ ಎಂದು ಭೀಮಾ ಏತ ನೀರಾವರಿ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಬಿ.ಎಸ್.ಐನಾಪೂರ ಬುಧವಾರ ಮಾಹಿತಿ ನೀಡಿದರು.

ಅಫಜಲಪುರ ಪಟ್ಟಣದಲ್ಲಿ 33 ಸಾವಿರ ಜನಸಂಖ್ಯೆಯಿದೆ. ಕುಡಿಯಲು ದಿನಕ್ಕೆ 3.5 ಎಂಎಲ್‌ಡಿ ನೀರು ಬೇಕು, ಆದರೆ ಪೂರೈಕೆ ಸಾಮರ್ಥ್ಯ ಇರುವುದು 2.5 ಎಂಎಲ್‌ಡಿ ಮಾತ್ರ ಎಂದು ಮುಖ್ಯಾಧಿಕಾರಿ ಮೊಹ್ಮದ ಖೈಸರ ಹುಸೇನಿ ತಿಳಿಸಿದರು.

**

ಪಟ್ಟಣದಲ್ಲಿ ನಲ್ಲಿ ನೀರಿನ ಪೈಪ್‌ಲೈನ್‌ ಸೋರುತ್ತಿರುವುದನ್ನು ತಡೆಯಬೇಕು. ಜಾಕ್‌ವೆಲ್‌ ಬಳಿ ತಕ್ಷಣ ತಾತ್ಕಾಲಿಕ ಒಡ್ಡು ನಿರ್ಮಿಸಬೇಕು
–ಸುರೇಶ ಅವಟೆ,
ತಾಲ್ಲೂಕು ಜೈ ಕರವೇ ಅಧ್ಯಕ್ಷ.

**

ಪಟ್ಟಣಕ್ಕೆ ಕುಡಿಯುವ ನೀರಿಗಾಗಿ 15 ದಿನಗಳಿಗೊಮ್ಮೆ ಸೊನ್ನ ಭೀಮಾ ಬ್ಯಾರೇಜ್‌ನಿಂದ ನೀರು ಬಿಡಲಾಗುತ್ತಿದೆ. ಇದನ್ನು ಕುಡಿಯಲು ಮಾತ್ರ ಉಪಯೋಗಿಸಬೇಕು
–ಬಿ.ಎಸ್.ಐನಾಪೂರ, ಕಾರ್ಯಪಾಲಕ ಎಂಜಿನಿಯರ್, ಭೀಮಾ ಏತ ನೀರಾವರಿ ಉಪ ವಿಭಾಗ.

**

ಪುರಸಭೆಯವರು ಪ್ರತಿ ವಾರ್ಡ್‌ನಲ್ಲಿ ಕೊಳವೆ ಬಾವಿ ಕೊರೆದು ಸಿಂಗಲ್‌ ಫೇಸ್ ಪಂಪಸೆಟ್‌ ಅಳವಡಿಸಬೇಕು.
–ರಾಜು ಪಾಟೀಲ, ಪುರಸಭೆ ಮಾಜಿ ಸದಸ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.