ADVERTISEMENT

ವಾಡಿ: ಶುದ್ಧ ನೀರಿನದ್ದೇ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 2 ಮೇ 2020, 19:08 IST
Last Updated 2 ಮೇ 2020, 19:08 IST
ವಾಡಿ ಪಟ್ಟಣದ ಜನರು ನೀರಿಗಾಗಿ ಎಸಿಸಿ ಅಳವಡಿಸಿದ ನಳಕ್ಕೆ ಮುಗಿಬಿದ್ದಿರುವುದು
ವಾಡಿ ಪಟ್ಟಣದ ಜನರು ನೀರಿಗಾಗಿ ಎಸಿಸಿ ಅಳವಡಿಸಿದ ನಳಕ್ಕೆ ಮುಗಿಬಿದ್ದಿರುವುದು   

ವಾಡಿ: ಭೀಮಾ ನದಿಯಲ್ಲಿರುವ ಪುರಸಭೆಯ ಜಾಕ್‌ವೆಲ್‌ಗೆ ನೀರಿನ ಕೊರತೆ ಉಂಟಾಗಿದೆ. ಇದರ ನೇರ ಪರಿಣಾಮ ವಾಡಿ ಪಟ್ಟಣದ ಸಾರ್ವಜನಿಕರ ಮೇಲೆ ಬೀಳುತ್ತಿದೆ.

ಪಟ್ಟಣದ ಹಲವು ಬಡಾವಣೆಗಳ ಜನರು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲು ಮೂರು ದಿನಗಳಿಗೊಮ್ಮೆ ಪೂರೈಸುತ್ತಿದ್ದ ನೀರು ಈಗ ಐದು ದಿನಗಳಿಗೊಮ್ಮೆ ಪೂರೈಕೆ ಆಗುತ್ತಿದೆ.

ಸರ್ಕಾರ ಶುದ್ಧ ಕುಡಿಯುವ ನೀರಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದರೂ ಅದರ ಸದುಪಯೋಗ ಆಗುತ್ತಿಲ್ಲ. ಸ್ಥಳೀಯ ಪುರಸಭೆ ಆಡಳಿತ ಶುದ್ಧ ನೀರು ಕೊಡಲು ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಸಾರ್ವಜನಿಕರು.

ADVERTISEMENT

ಎಸಿಸಿ ಕಂಪನಿ ಅಳವಡಿಸಿರುವ ನಳದ ಮುಂದೆ ಸಾರ್ವಜನಿಕರು ಕೊರೊನಾ ಆತಂಕವಿದ್ದರೂ ಅಂತರ ಮರೆತು ಹನಿ ನೀರು ದಕ್ಕಿಸಿಕೊಳ್ಳಲು ಮುಗಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ.

50 ಸಾವಿರ ಜನಸಂಖ್ಯೆಯ ಪಟ್ಟಣದಲ್ಲಿ 23 ವಾರ್ಡ್‌ಗಳಿವೆ. ಬಹುತೇಕ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ

ಶುದ್ಧ ನೀರು ಮರೀಚಿಕೆ: ನೀರಿನ ಸಮಸ್ಯೆ ಒಂದು ಕಡೆಯಾದರೆ ಶುದ್ಧ ನೀರು ಸಿಗದಿರುವುದು ಮತ್ತೊಂದು ಸಮಸ್ಯೆಯಾಗಿದೆ. ನೀರು ಶುದ್ಧೀಕರಣ ಘಟಕವಿದ್ದರೂ ಶುದ್ಧ ನೀರು ಮಾತ್ರ ಪೂರೈಕೆ ಆಗುತ್ತಿಲ್ಲ.

‘ನಿರ್ವಹಣೆಯ ಹೆಸರಿನಲ್ಲಿ ಹಣ ಸುರಿಲಾಗುತ್ತಿದೆಯೇ ಹೊರತು ಜನರಿಗೆ ಉಪಯೋಗ ಆಗುತ್ತಿಲ್ಲ. ಭೀಮಾ ನದಿಯ ನೀರಿಗೆ ಅಲ್ಪ ಪ್ರಮಾಣದಲ್ಲಿ ಬ್ಲೀಚಿಂಗ್ ಪೌಡರ್ ಹಾಕಿ ಶುದ್ಧ ನೀರು ಬಿಡುತ್ತಿದ್ದೇವೆ ಎಂದು ನಂಬಿಸಲಾಗುತ್ತಿದೆ. ಆದರೆ ಪಾಚಿಗಟ್ಟಿದ ಅಶುದ್ಧ ನೀರನ್ನು ಪುರಸಭೆ ಪೂರೈಸುತ್ತಿದೆ. ಕೆಲವೊಮ್ಮೆ ಸಣ್ಣ ಹುಳಗಳೂ ಇರುತ್ತವೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸಿದ್ದು ಪಂಚಾಳ ಹಾಗೂ ಯೇಶಪ್ಪಾ ಕೇದಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.