ADVERTISEMENT

ಭೀಮಾ ನದಿಯಲ್ಲಿ ನೀರು ಶೇಖರಣೆ

ಜೇವರ್ಗಿ; ಪುರಸಭೆಯಿಂದ ಮುನ್ನೆಚ್ಚರಿಕೆ ಕ್ರಮ, ಸದ್ಯಕ್ಕಿಲ್ಲ ಕುಡಿಯುವ ನೀರಿನ ಸಮಸ್ಯೆ

ವೆಂಕಟೇಶ ಆರ್.ಹರವಾಳ
Published 10 ಏಪ್ರಿಲ್ 2022, 14:25 IST
Last Updated 10 ಏಪ್ರಿಲ್ 2022, 14:25 IST
ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿಯ ಭೀಮಾ ನದಿ ದಂಡೆಯಲ್ಲಿ ನೀರು ಶೇಖರಣೆಗೆ ನಿರ್ಮಿಸಿದ ಜಾಕ್‌ವೆಲ್
ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿಯ ಭೀಮಾ ನದಿ ದಂಡೆಯಲ್ಲಿ ನೀರು ಶೇಖರಣೆಗೆ ನಿರ್ಮಿಸಿದ ಜಾಕ್‌ವೆಲ್   

ಜೇವರ್ಗಿ: ಬಿಸಿಲಿನ ಜತೆ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಆದರೆ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಉಂಟಾಗದತೆ ಪುರಸಭೆ ಅಧಿಕಾರಿಗಳು ಮುನ್ನೇಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

ಸುಮಾರು 25 ಸಾವಿರ ಜನಸಂಖ್ಯೆಯುಳ್ಳ ಪಟ್ಟಣದಲ್ಲಿ 6 ಕಿರು ನೀರು ಸರಬುರಾಜು ಯೋಜನೆಗಳು, 2 ತೆರೆದ ಬಾವಿ ಹಾಗೂ 45 ಕೊಳವೆ ಬಾವಿಗಳಿವೆ. ಹೀಗಾಗಿ ಇವರೆಗೂ ನೀರಿನ ಸಮಸ್ಯೆ ಉಂಟಾಗಿಲ್ಲ. ಭೀಮಾ ನದಿಗೆ ಸಾಕಷ್ಟು ಒಳಹರಿವು ಇದೆ. ಇದರಿಂದ ಪ್ರಸಕ್ತ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿಲ್ಲ ಎಂದು ಜೇವರ್ಗಿ ಪುರಸಭೆ ಮುಖ್ಯಾಧಿಕಾರಿ ಶರಣಯ್ಯ ಹಿರೇಮಠ ತಿಳಿಸಿದ್ದಾರೆ.

ಕಟ್ಟಿಸಂಗಾವಿ ಭೀಮಾ ಸೇತುವೆ ಕೆಳಗಡೆ ಸುಮಾರು 2 ಕಿ.ಮೀ ಅಂತರದಲ್ಲಿ ವೆಂಟೆಡ್ ಬ್ಯಾರೇಜ್ (ನೀರು ಶೇಖರಣೆಗೆ ತಡೆಗೋಡೆ) ನಿರ್ಮಾಣ ಮಾಡಿದ್ದರಿಂದ ಕಟ್ಟಿಸಂಗಾವಿಯಿಂದ ಮೇಲಗಡೆ ಇರುವ ಕೋಳಕೂರ ಗ್ರಾಮದವರೆಗೆ ಭೀಮಾ ನದಿಯ ಹಿನ್ನೀರು ಶೇಖರಣೆಯಾಗಿದೆ.

ADVERTISEMENT

ಕಟ್ಟಿಸಂಗಾವಿಯ ಭೀಮಾ ನದಿಯ ಹತ್ತಿರವಿರುವ ಜಾಕ್‌ವೆಲ್‌ನಿಂದ ನೀರು ಶೇಖರಣೆ ಘಟಕಕ್ಕೆ ಸರಬುರಾಜು ಮಾಡಲಾಗುತ್ತಿದೆ. ಅಲ್ಲಿಂದ ಪಟ್ಟಣದ ವಿವಿಧ ಓವರ್ ಹೆಡ್ ಟ್ಯಾಂಕ್‌ಗಳಿಗೆ ಹರಿಸಲಾಗುತ್ತದೆ.

ಬಿಸಿಲು ಹೆಚ್ಚಾಗುತ್ತಿದ್ದಂತೆ ನೀರು ಕಡಿಮೆಯಾಗುತ್ತಿದೆ. ಹೀಗಾಗಿ ಜಾಕ್ ವೆಲ್ ಹತ್ತಿರ ಆಳವಾದ ತಗ್ಗು ನಿರ್ಮಿಸಿ ನೀರನ್ನು ಹಿಡಿದಟ್ಟುಕೊಳ್ಳಲಾಗಿದೆ. ಬೇಸಿಗೆ ಕಾಲದಲ್ಲಿ ಪಟ್ಟಣದ ಜನತೆಗೆ ಪ್ರತಿ ಮೂರು ದಿನಗಳಿಗೊಮ್ಮೆ ನಲ್ಲಿಗಳಿಗೆ ನೀರು ಸರಬುರಾಜು ಮಾಡಲಾಗುತ್ತಿದೆ. ಪುರಸಭೆ ವತಿಯಿಂದ ಈಚೆಗೆ ಪಟ್ಟಣದ 23 ವಾರ್ಡಗಳಲ್ಲಿ ತಲಾ ಒಂದರಂತೆ ಕೊಳವೆಬಾವಿಗಳನ್ನು ಕೊರೆಸಲಾಗಿದೆ.

ಜೆಸ್ಕಾಂ ಅಧಿಕಾರಿಗಳು ಪಟ್ಟಣಕ್ಕೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಿದರೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ಪುರಸಭೆ ಸಿಬ್ಬಂದಿಯೊಬ್ಬರು ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.