ADVERTISEMENT

ಕಲಬುರಗಿ: ನಾಳೆಯಿಂದ ವಾರಾಂತ್ಯದ ಕರ್ಫ್ಯೂ

ವಾರದಲ್ಲಿ ಐದು ದಿನ ಮಾತ್ರ ಕಚೇರಿ; ಲಸಿಕೆ ಪಡೆಯದ ವ್ಯಕ್ತಿಗಳಿಗೆ ಸಿನಿಮಾ ಹಾಲ್‌ಗೆ ಪ್ರವೇಶವಿಲ್ಲ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 19:30 IST
Last Updated 5 ಜನವರಿ 2022, 19:30 IST
ಡಾ.ದಿಲೀಷ್ ಶಶಿ
ಡಾ.ದಿಲೀಷ್ ಶಶಿ   

ಕಲಬುರಗಿ: ಜಿಲ್ಲೆಯಲ್ಲಿ ಕ್ರಮೇಣ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಹಾಗೂ ಪಕ್ಕದ ಮಹಾರಾಷ್ಟ್ರದಲ್ಲಿಯೂ ಪ್ರಕರಣಗಳು ವೇಗವಾಗಿ ಹರಡುತ್ತಿರುವುದರಿಂದ ಕಲಬುರಗಿ ಜಿಲ್ಲಾಡಳಿತವು ಇದೇ 7ರಿಂದ 17ರವರೆಗೆ ವಾರಾಂತ್ಯದ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದೆ.

ಈ ಕುರಿತು ಮಾರ್ಗಸೂಚಿ ಹೊರಡಿಸಿರುವ ಪ್ರಭಾರ ಜಿಲ್ಲಾಧಿಕಾರಿ ಡಾ. ದಿಲೀಷ್‌ ಶಶಿ, ‘ವಾರದ ಎಲ್ಲ ದಿನವೂ ರಾತ್ರಿ ಕರ್ಫ್ಯೂ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಎಲ್ಲ ಕಚೇರಿಗಳು ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ. ಕರ್ಫ್ಯೂ ಸಂದರ್ಭದಲ್ಲಿ ವಿಧಿಸಲಾದ ನಿಯಮಗಳನ್ನು ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.

ಜಿಲ್ಲೆಯಾದ್ಯಂತ ವಾರಾಂತ್ಯದ ಕರ್ಫ್ಯೂ ಜನವರಿ 7ರ ರಾತ್ರಿ 8ರಿಂದ ಜ 10ರ ಬೆಳಿಗ್ಗೆ 5 ಗಂಟೆಯವರೆಗೆ ಹಾಗೂ ಜ 14ರ ರಾತ್ರಿ 8ರಿಂದ 17ರ ಬೆಳಿಗ್ಗೆ 5 ಗಂಟೆಯವರೆಗೆ ಇರಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಮಾರ್ಗಸೂಚಿಗಳೇನು? ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಅವಧಿಯಲ್ಲಿ ಅತ್ಯವಶ್ಯಕ ಚಟುವಟಿಕೆಗಳನ್ನು ಹೊರತುಪಡಿಸಿ ಸಂಚಾರ ಮಾಡುವುದನ್ನು ನಿಷೇಧಿಸಲಾಗಿದೆ.

ಹೋಟೆಲ್, ಬಾರ್ ಅಂಡ್ ರೆಸ್ಟೊರೆಂಟ್‌, ಸಿನಿಮಾ ಮಂದಿರಗಳು, ರಂಗಮಂದಿರಗಳು, ಸಭಾಂಗಣ ಸೇರಿದಂತೆ ಇತರೆ ಜನ ಸೇರುವ ಸ್ಥಳಗಳ ಒಟ್ಟು ಸಾಮರ್ಥ್ಯದ ಶೇ 50ರಷ್ಟು ಆಸನಗಳನ್ನು ಮಾತ್ರ ಭರ್ತಿ ಮಾಡಬಹುದು. ಇಲ್ಲಿ ಕೋವಿಡ್ ಲಸಿಕೆ ಪಡೆಯದ ವ್ಯಕ್ತಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ.

‘ದರ್ಶನಕ್ಕೆ ಮಾತ್ರ ಅವಕಾಶ’

ಜಿಲ್ಲೆಯ ದೇವಸ್ಥಾನಗಳಂತಹ ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶವಿದೆ. ಆದರೆ, ಯಾವುದೇ ಸೇವೆಗಳಿಗೆ ಅವಕಾಶವಿಲ್ಲ. ಒಂದು ಬಾರಿ 50 ಜನರಿಗೆ ಮಾತ್ರ ಒಳಗೆ ಬರಲು ಅವಕಾಶವಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.