ಕಲಬುರಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕದ ಮಕ್ಕಳು ಕಡಿಮೆ ಫಲಿತಾಂಶ ಪಡೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಮಾಜಮುಖಿ ಚಿಂತನೆಯ ಸರ್ಕಾರಿ ಶಾಲಾ ಶಿಕ್ಷಕರ ತಂಡವೊಂದು ಪರೀಕ್ಷೆಯ ಸಂದರ್ಭದಲ್ಲಿ ವಾಟ್ಸ್‌ಆ್ಯಪ್ ಹಾಗೂ ಟೆಲಿಗ್ರಾಂ ಚಾನೆಲ್ ಆರಂಭಿಸಿದ್ದು, ವಿವಿಧ ಶಾಲೆಗಳಲ್ಲಿ 24 ಸಾವಿರ ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ, ಚಿಂಚೋಳಿ, ರಾಯಚೂರು ಜಿಲ್ಲೆಯ ದೇವದುರ್ಗ, ವಿಜಯನಗರ, ಹಾವೇರಿ ಜಿಲ್ಲೆಯ ಸಂಪನ್ಮೂಲ ಶಿಕ್ಷಕರಾಗಿರುವವರು ಸ್ವಯಂ ಪ್ರೇರಣೆಯಿಂದ ಈ ಕೈಂಕರ್ಯವನ್ನು ಮಾಡುತ್ತಾ ಬಂದಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದ್ದು, ಇದರ ಪ್ರಯೋಜನ ಪಡೆದ ವಿದ್ಯಾರ್ಥಿಗಳು 624 ಅಂಕಗಳನ್ನು ಪಡೆದವರೂ ಇದ್ದಾರೆ.
2021ರಲ್ಲಿ ಕೋವಿಡ್ ಕಾರಣದಿಂದಾಗಿ ಶಾಲೆಗಳು ಮುಚ್ಚಿಹೋಗಿದ್ದವು. ತರಗತಿಗಳು ನಡೆಯಲಿಲ್ಲ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕೆಲ ಸಮಾನ ಮನಸ್ಕ ಶಿಕ್ಷಕರು ಸೇರಿಕೊಂಡು ಟೆಲಿಗ್ರಾಂ ಚಾನೆಲ್ ಆರಂಭಿಸಿ ಅದರಲ್ಲಿ ವಿದ್ಯಾರ್ಥಿಗಳಿಗೆ ವಿಷಯ ಸಂಬಂಧಿ ವಿಷಯಗಳ ಬಗ್ಗೆ ಮಾಹಿತಿ ನೀಡಲಾರಂಭಿಸಿದರು. ಪರೀಕ್ಷೆ ಸಮೀಪಿಸಿದಾಗ ಸಂಬಂಧಪಟ್ಟ ವಿಷಯ ಶಿಕ್ಷಕರೊಂದಿಗೆ ನೇರ ಫೋನ್ ಇನ್ ಕಾರ್ಯಕ್ರಮವನ್ನೂ ಆಯೋಜಿಸಿದರು. ಇದರಿಂದಾಗಿ ಮಕ್ಕಳು ವೈಯಕ್ತಿಕವಾಗಿ ತಮಗೆ ಕಠಿಣ ಎನಿಸಿದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ಅದನ್ನು ಈ ಬಾರಿಯೂ ಮುಂದುವರಿಸಲಾಗಿದೆ ಎನ್ನುತ್ತಾರೆ ಈ ಯೋಜನೆಯ ರೂವಾರಿಗಳಲ್ಲೊಬ್ಬರಾದ ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಕಿಣ್ಣಿಸುಲ್ತಾನ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾಗಿರುವ ಗುಲಾಂ ನಬಿ.
‘ಪ್ರತಿದಿನವೂ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಒಂದು ಅಥವಾ ಎರಡು ಪಾಠ, ಅಧ್ಯಾಯಗಳಿಗೆ ಸಂಬಂಧಿಸಿದ 40 ಅಂಕಗಳಿಗೆ ಸೀಮಿತವಾಗಿ ರಸಪ್ರಶ್ನೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಒಂದು ಮತ್ತು ಎರಡು ಅಂಕಗಳ ಪ್ರಶ್ನೆಗಳನ್ನು ಕೆಳಲಾಗುತ್ತಿದೆ. ರಸಪ್ರಶ್ನೆ ಮುಗಿದ ನಂತರ ಕೆಲವು ವಿಷಯಗಳ ಸಂಪನ್ಮೂಲ ಶಿಕ್ಷಕರು ಅತಿ ಹೆಚ್ಚು ಅಂಕ ಪಡೆದ ಐದು ವಿದ್ಯಾರ್ಥಿಗಳಿಗೆ ಡಿಜಿಟಲ್ ಪ್ರಮಾಣಪತ್ರವನ್ನು ನೀಡುತ್ತಿದ್ದಾರೆ. ಇದರಿಂದ ಮಕ್ಕಳ ಭಾಗವಹಿಸುವಿಕೆಯೂ ಹೆಚ್ಚಾಗಿದೆ’ ಎನ್ನುತ್ತಾರೆ ಜಿಲ್ಲೆಯ ಕಮಲಾಪುರ ಡಯಟ್‌ನಲ್ಲಿ ಸಹ ಶಿಕ್ಷಕರಾಗಿರುವ ಎಂ.ಜಿ.ಸತೀಶ.
ಜನವರಿವರೆಗೆ ರಸಪ್ರಶ್ನೆ ಸ್ಪರ್ಧೆ ನಡೆಯಲಿದ್ದು ಫೆಬ್ರುವರಿ ಮಾರ್ಚ್‌ನಲ್ಲಿ ನೇರ ಇನ್ ಫೋನ್ ಕಾರ್ಯಕ್ರಮ ನಡೆಯಲಿದೆ. ಪ್ರತಿ ದಿನ ಸಂಜೆ 7ರಿಂದ 10ರವರೆಗೂ ವಿದ್ಯಾರ್ಥಿಗಳು ಕರೆ ಮಾಡಿ ಪರಿಹರಿಸಿಕೊಳ್ಳಬಹುದುಗುಲಾಂ ನಬಿ ಪ್ರಭಾರ ಮುಖ್ಯ ಶಿಕ್ಷಕ ಕಿಣ್ಣಿಸುಲ್ತಾನ ಪ್ರೌಢಶಾಲೆ
ಕೋವಿಡ್ ಸಂದರ್ಭದಲ್ಲಿ ಒಂದಷ್ಟು ಶಿಕ್ಷಕರು ಸೇರಿ ಮಾಡಿದ ಯೋಜನೆ ಇಂದು ಹತ್ತಾರು ಸಾವಿರ ಮಕ್ಕಳಿಗೆ ದಾರಿದೀಪವಾಗುತ್ತಿದೆ. ರಾಜ್ಯದ 30ಕ್ಕೂ ಅಧಿಕ ಶಿಕ್ಷಕರು ಇದಕ್ಕಾಗಿ ಶ್ರಮಿಸುತ್ತಿದ್ದಾರೆಎಂ.ಜಿ. ಸತೀಶ್ ಸಹ ಶಿಕ್ಷಕ ಕಮಲಾಪುರ ಡಯಟ್
ಸೋಮವಾರದಿಂದ ಶನಿವಾರದವರೆಗೆ ಪ್ರತಿ ದಿನ ಸಂಜೆ 7ರಿಂದ 8ರವರೆಗೆ ಒಂದೊಂದು ವಿಷಯದ ಕುರಿತು ವಿವಿಧ ಶಾಲೆಗಳಲ್ಲಿ ಸಹ ಶಿಕ್ಷಕರಾಗಿರುವವರು ಪಾಠ ಮಾಡುತ್ತಾರೆ. ಜೊತೆಗೆ ವಿಷಯಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆಯನ್ನೂ ಮಾಡುತ್ತಾರೆ. ಸೋಮವಾರ ಕನ್ನಡ ವಿಷಯವನ್ನು ಜಾಲಹಳ್ಳಿಯಲ್ಲಿ ಸರ್ಕಾರಿ ಶಾಲೆ ಶಿಕ್ಷಕರಾಗಿರುವ ಗದ್ದೆಪ್ಪ ಹಾಗೂ ಕಿಣ್ಣಿಸುಲ್ತಾನದ ಶಿಕ್ಷಕ ಶಶಿಕಾಂತ ಅವರು ಬೋಧಿಸುತ್ತಿದ್ದಾರೆ.
ಮಂಗಳವಾರ ಗಣಿತ ವಿಷಯವನ್ನು ಸಂಡೂರಿನ ವಿಜಯಕುಮಾರ ಆಳಂದದ ಪ್ರಶಾಂತ ಅವರು ಬೋಧಿಸುವರು. ಬುಧವಾರ ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಿಣ್ಣಿಸುಲ್ತಾನದ ಬಸವರಾಜ ಪಾವಲೆ ಚಿಂಚೋಳಿಯ ಕವಿರಾಜ ಜಿಡಗೆ ಪರಿಹರಿಸುವರು. ಗುರುವಾರ ವಿಜ್ಞಾನ ವಿಷಯವನ್ನು ಹಾವೇರಿಯ ಗಿರೀಶ್ ಆಳಂದ ತಾಲ್ಲೂಕು ಪಡಸಾವಳಿಯ ಶಿವಕುಮಾರ ಬೋಧಿಸುವರು. ಶುಕ್ರವಾರ ಹಿಂದಿ ವಿಷಯದ ಕುರಿತು ಕಿಣ್ಣಿಸುಲ್ತಾನದ ಗುಲಾಂ ನಬಿ ಬಳ್ಳಾರಿಯ ಪಾಷಾ ಹಾಗೂ ವಿಜಯನಗರದ ಅಬ್ದುಲ್ ಕಲಾಂ ಅವರು ಪಾಠ ಮಾಡುವರು. ಶನಿವಾರ ಸಮಾಜ ವಿಜ್ಞಾನ ವಿಷಯವನ್ನು ಕಮಲಾಪುರ ಡಯಟ್‌ನಲ್ಲಿ ಸಹ ಶಿಕ್ಷಕರಾಗಿರುವ ಎಂ.ಜಿ. ಸತೀಶ್ ಅವರು ಬೋಧಿಸುತ್ತಿದ್ದಾರೆ.
ಪ್ರತಿದಿನವೂ ಎಸ್ಸೆಸ್ಸೆಲ್ಸಿ ರಸಪ್ರಶ್ನೆಯಲ್ಲಿ ಭಾಗವಹಿಸಬೇಕಾದರೆ ವಿದ್ಯಾರ್ಥಿಗಳು ಕೆಳಗಡೆ ನೀಡಿರುವ ‘ಎಸ್ಸೆಸ್ಸೆಲ್ಸಿ ಟಾರ್ಗೆಟ್ 625’ ವಾಟ್ಸ್‌ಆ್ಯಪ್ ಚಾನೆಲ್ ಅನ್ನು ಲಿಂಕ್ ಮೂಲಕ ಸೇರಬಹುದಾಗಿದೆ.https://whatsapp.com/channel/0029VajEViX9Bb67NmfRpO03 ಟೆಲಿಗ್ರಾಂನಲ್ಲಿ Karnataka SSLC Students Group ಚಾನೆಲ್‌ಗೆ ಸೇರ್ಪಡೆಯಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.