ADVERTISEMENT

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪ್ರಿಯಕರ ಜತೆ ಸೇರಿ ಪತಿಯನ್ನೆ ಕೊಂದ ಪತ್ನಿ

ಹರಿದ ನೆತ್ತರು; ಸ್ಥಳಕ್ಕೆ ಎಸ್ಪಿ ಅಡ್ಡೂರು ಶ್ರೀನಿವಾಸುಲು ಭೇಟಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 6:08 IST
Last Updated 10 ಸೆಪ್ಟೆಂಬರ್ 2025, 6:08 IST
ಸೇಡಂ ಕೊಲೆ ನಡೆದ ಸ್ಥಳವನ್ನು ಪರಿಶೀಲಿಸುತ್ತಿರುವ ಮಾಡುತ್ತಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳು
ಸೇಡಂ ಕೊಲೆ ನಡೆದ ಸ್ಥಳವನ್ನು ಪರಿಶೀಲಿಸುತ್ತಿರುವ ಮಾಡುತ್ತಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳು   

ಸೇಡಂ: ಪ್ರಿಯಕರನೊಂದಿಗೆ ಇರುವ ಅಕ್ರಮ ಸಂಬಂಧ ಪ್ರಶ್ನಿಸಿ ಸೇಡಂ ಪೊಲೀಸ್ ಠಾಣೆಗೆ ದೂರು ನೀಡಲು ಹೊರಟಿದ್ದ ಪತಿಯನ್ನೇ ಪತ್ನಿ ಮತ್ತು ಪ್ರಿಯಕರ ಇಬ್ಬರು ಸೇರಿ ಕೊಂದ ಘಟನೆ ಪಟ್ಟಣದ ಊಡಗಿ ಕ್ರಾಸ್ ಬಳಿ ಮಂಗಳವಾರ ನಸುಕಿನ 3.30ರ ಹೊತ್ತಿಗೆ ನಡೆದಿದೆ.

ಪಟ್ಟಣದ ನಿವಾಸಿ ಶೇಖ ರಿಯಾಜೊದ್ದಿನ್ (40) ಕೊಲೆಯಾದವರು. ಶೇಖ ರಿಯಾಜೋದ್ದಿನ್ ಮತ್ತು ರಿಯಾನಾಬೇಗಂ ಅವರಿಗೆ ಮದುವೆಯಾಗಿ 15 ವರ್ಷವಾಗಿತ್ತು. ಇಬ್ಬರಿಗೂ ಮೂವರು ಮಕ್ಕಳಿದ್ದಾರೆ. ಆದರೂ ರಿಯಾನಾಬೇಗಂ ಮಹ್ಮದ್‌ಜಹೀರ್ ಎಂಬುವವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಚಾರವಾಗಿ ಪತಿ–ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

‘ಅಕ್ರಮ ಸಂಬಂಧದ ಮತ್ತೆ ಪತಿ–ಪತ್ನಿ ನಡುವೆ ನಡೆಯುತ್ತಿದ್ದ ಜಗಳ ತಾರಕಕ್ಕೇರಿತ್ತು. ಈ ಕುರಿತು ಸೇಡಂ ಪೊಲೀಸ್ ಠಾಣೆಗೆ ದೂರು ನೀಡಲು ಪತಿ ರಿಯಾಜೋದ್ದಿನ್ ತೆರಳುತ್ತಿದ್ದರು. ಪತ್ನಿ ಆಗ ಪ್ರಿಯಕರ ಮಹ್ಮದ್‌ಜಹೀರ್‌ಗೆ ಕರೆ ಮಾಡಿದ್ದಳು. ಊಡಗಿ ರಸ್ತೆಗೆ ಶೇಖ್ ರಿಯಾಜೋದ್ದಿನ್ ತಲುಪಿದ್ದಾಗ ಮಹ್ಮದ್ ಜಹೀರ್ ಬಂದಿದ್ದರಿಂದ ಜಗಳ ನಡೆದಿದೆ. ಆಗ ಮಹ್ಮದ್ ಜಮೀರ್ ಕಬ್ಬಿಣದ ರಾಡನಿಂದ ಹೊಡೆದಿದ್ದು, ಸ್ಥಳದಲ್ಲಿಯೇ ಶೇಖ್ ರಿಯಾಜ್ ಮೃತಪಟ್ಟಿದ್ದಾನೆ’
ಎಂದು ಮೂಲಗಳು ತಿಳಿಸಿವೆ.

ADVERTISEMENT

ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು: ರಾತ್ರಿ ಗಸ್ತಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸೇಡಂ ಪೊಲೀಸ್ ಠಾಣೆಯ ಪೊಲೀಸರು ಮಂಗಳವಾರ ಬೆಳಗಿನ ಜಾವ ಊಡಗಿ– ಸೇಡಂ ವಾಸವದತ್ತ ರಸ್ತೆ ಮೇಲೆ ಕರ್ತವ್ಯದಲ್ಲಿದ್ದರು. ಚೀರಾಟದ ಶಬ್ದ ಕೇಳಿ ಊಡಗಿ ರಸ್ತೆ ಕಡೆ ಓಡಿದ್ದಾರೆ. ಜಗಳ ನಡೆಯುತ್ತಿರುವುದನ್ನು ಗಮನಿಸಿದ ಪೊಲೀಸರು ಬಿಡಿಸಲು ಮುಂದಾಗುವಷ್ಟರಲ್ಲಿಯೇ ರಿಯಾಜೋದ್ದಿನ್ ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದ. ಸ್ಥಳದಲ್ಲಿಯೇ ಇದ್ದ ಮಹ್ಮದ್ ಜಹೀರ್‌ನನ್ನು ವಶಕ್ಕೆ ಪಡೆದಿದ್ದಾರೆ ಎಂದು ಸಿಪಿಐ ಮಹಾದೇವ ದಿಡ್ಡಿಮನಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ಅಡ್ಡೂರು ಶ್ರೀನಿವಾಸುಲು, ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಮಹಾದೇವ ದಿಡ್ಡಿಮನಿ, ಪಿಎಸ್‌ಐ ಉಪ್ಪೇಂದ್ರಕುಮಾರ, ಕಾನ್‌ಸ್ಟೆಬಲ್‌ಗಳಾದ ಮಾರುತಿ, ನಾಗರಾಜ, ಬಾಲಕೃಷ್ಣರೆಡ್ಡಿ ಇದ್ದರು. ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಭೇಟಿ ನೀಡಿದ್ದರು.

ಈ ಕುರಿತು ಕೊಲೆಯಾದ ವ್ಯಕ್ತಿ ಪತ್ನಿ ರಿಯಾನಾಬೇಗಂ ಹಾಗೂ ಮಹ್ಮದ್‌ಜಹೀರ್ ವಿರುದ್ಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.